ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ದೇವಾಲಯವೊಂದು ನಿರ್ಮಾಣವಾಗಲಿದೆ. ಈ ದೇವಾಲಯದಲ್ಲಿ ಮೂರು ಧರ್ಮದ ಜನರು ದೇವರನ್ನು ಪೂಜಿಸಬಹುದು. ಈ ದೇವಾಲಯ ನಿರ್ಮಾಣಕ್ಕೆ ಮುಂದಾಗಿರುವವರು ಚಲನಚಿತ್ರ ನಟ ಹಾಗೂ ನಿರ್ದೇಶಕರಾಗಿರುವ ರಾಘವ ಲಾರೆನ್ಸ್.
ಸಾಮಾಜಿಕ ಜಾಲತಾಣಗಳ ಮೂಲಕ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.
ತಮಿಳು ಚಲನಚಿತ್ರಗಳಲ್ಲಿ ನೃತ್ಯ ಸಂಯೋಜಕರಾಗಿ ಸಿನೆಮಾ ಜಗತ್ತು ಪ್ರವೇಶಿಸಿದ ರಾಘವ ಲಾರೆನ್ಸ್, ನಟ ಹಾಗೂ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಲವು ತಮಿಳು ಚಲನಚಿತ್ರವನ್ನು ನಿರ್ದೇಶಿಸಿದ ಅವರ ಸಿನೆಮಾಗಳ ಸಾಲಿಗೆ ಕಾಂಚನಾ ಸರಣಿ ಕೂಡಾ ಸೇರಿವೆ.
ಚಲನಚಿತ್ರದ ಹೊರತಾಗಿ ಅವರು ಬಡವರಿಗೆ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತಹ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಅನಾಥ ಮಕ್ಕಳಿಗಾಗಿ ಟ್ರಸ್ಟ್ ನಡೆಸುತ್ತಿದ್ದಾರೆ.
ಸದ್ಯಕ್ಕೆ ರಾಘವ ಅವರು ತಮ್ಮ ಸೂಪರ್ ಹಿಟ್ ಚಿತ್ರ 'ಕಾಂಚನ'ದ ರಿಮೇಕ್ ಆಗಿರುವ ಬಾಲಿವುಡ್ ಸಿನೆಮಾ ಲಕ್ಷ್ಮಿ ಬಾಂಬ್ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಲಕ್ಷ್ಮಿ ಬಾಂಬ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.