ಮುಂಬೈ:ಲಾಕ್ಡೌನ್ನಿಂದ ನಗರದಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು ಬಸ್, ವಿಮಾನ ವ್ಯವಸ್ಥೆ ಕಲ್ಪಿಸಿ ದೇಶದ ಜನರ ಹೃದಯ ಗೆದ್ದ ನಟ ಸೋನುಸೂದ್ ಅವರಿಗೆ ಲಾಕ್ಡೌನ್ ಸಮಯದಲ್ಲಿ ಗಂಡನಿಂದ ಬೇಸರಗೊಂಡ ಮಹಿಳೆಯೊಬ್ಬರು ವಿಚಿತ್ರ ಮನವಿಯೊಂದನ್ನು ಕಳುಹಿಸಿದ್ದಾರೆ. ಅದಕ್ಕೆ ಸೋನುಸೂದ್ ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
ಬೇಸರಗೊಂಡು ನಟ ಸೋನುಸೂದ್ ಅವರಿಗೆ ಮನವಿ ಮಾಡಿರುವ ಮಹಿಳೆಯ ಹೆಸರು ಸುಶ್ರೀಮಾ. ಮೇ 31ರಂದು (ಭಾನುವಾರ) ಮಹಿಳೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಸೋನುಸೂದ್ ಅವರು ಕೂಡ ನಿನ್ನೆಯೇ ಉತ್ತರ ಕೊಟ್ಟಿದ್ದಾರೆ. ಸುಶ್ರೀಮಾ ಅವರು ಟ್ವಿಟರ್ನಲ್ಲಿ ಬರೆದುಕೊಂಡಿರುವುದು ಹೀಗಿದೆ..
'ಸೋನುಸೂದ್ ಅವರೇ, ಲಾಕ್ಡೌನ್ ಆರಂಭವಾದಾಗಿನಿಂದ ಈವರೆಗೂ ಗಂಡನ ಜೊತೆ ಮನೆಯಲ್ಲೇ ಇದ್ದೇನೆ. ಸಾಧ್ಯವಾದರೆ ನನ್ನನ್ನು ನನ್ನ ತಾಯಿ ಮನೆಗೆ ಕಳುಹಿಸಿಕೊಡಿ. ಇಲ್ಲವೇ ನನ್ನ ಗಂಡನನ್ನು ಅವರ ಮನೆಗೆ ಕಳುಹಿಸಿಕೊಡಿ. ಯಾಕಂದರೆ, ಇನ್ಮುಂದೆ ನಾನಂತೂ ಆತನೊಂದಿಗೆ ಇರಲು ಇಚ್ಛಿಸುವುದಿಲ್ಲ' ಎಂದು ಸುಶ್ರೀಮಾ ಆಚಾರ್ಯ ಎಂಬ ಮಹಿಳೆ ಮನವಿ ಮಾಡಿದ್ದಾರೆ.
ಈ ಟ್ವೀಟ್ ಮನವಿಗೆ ಪ್ರತಿಕ್ರಿಯಿಸಿರುವ ನಟ ಸೋನುಸೂದ್ ಅವರು, 'ಅದಕ್ಕೆ ನನ್ನ ಬಳಿ ಉತ್ತಮ ಉಪಾಯವಿದೆ. ಇಬ್ಬರನ್ನೂ ಗೋವಾಕ್ಕೆ ಕಳುಹಿಸಿಕೊಡುವೆ. 😂 ಏನಂತೀರಾ? ಎಂದು ಹಾಸ್ಯವಾಗಿ ಉತ್ತರಿಸಿದ್ದಾರೆ.
ಮಹಾರಾಷ್ಟ್ರ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಿಕೊಡುವಲ್ಲಿ ಸೋನುಸೂದ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಸ್ವಂತ ಖರ್ಚಿನಲ್ಲೇ ಈ ಸಹಾಯ ಮಾಡುತ್ತಿದ್ದಾರೆ. ಸೋನುಸೂದ್ ಅವರ ಈ ಸೇವೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ.