ಮುಂಬೈ :ಕೊರೊನಾ ವೈರಸ್ ಸಂದರ್ಭದಲ್ಲಿ ಸಾವಿರಾರು ನಿರ್ಗತಿಕರಿಗೆ ಸಹಾಯ ಮಾಡಿ ನಿಜ ಜೀವನದಲ್ಲೂ ಹೀರೊ ಆಗಿ ಹೊರಹೊಮ್ಮಿರುವ ನಟ ಸೋನು ಸೂದ್ಗೆ ಇದೀಗ ಸಂಕಷ್ಟ ಎದುರಾಗಿದೆ. ಅವರಿಗೆ ಸಂಬಂಧಿಸಿರುವ ಆರು ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ನಟ ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಅವರನ್ನ ಅಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಐಟಿ ಅಧಿಕಾರಿಗಳು ಸರ್ವೇ ನಡೆಸಿದ್ದು, ಇದರಿಂದ ಅವರ ಸಾವಿರಾರು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಬಹುಭಾಷಾ ನಟ ಸೋನು ಸೂದ್ಗೆ ಸೇರಿರುವ ಆರು ಸ್ಥಳಗಳಲ್ಲಿ ಐಟಿ ಇಲಾಖೆ ಸರ್ವೇ ನಡೆಸಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟನಿಂದ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.