ಬಣ್ಣದ ಲೋಕವೇ ಹಾಗೇ ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತದೆ. ಆದರೆ ಅದನ್ನು ಮನಃಪೂರ್ವಕವಾಗಿ ಸ್ವೀಕರಿಸಿದವರು ಮಾತ್ರ ಇಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ. ಅದರಲ್ಲೂ ಈ ಮುದ್ದಾದ ಅಕ್ಕ ತಂಗಿಯ ಜೋಡಿಯನ್ನಂತೂ ನೋಡಲು ಎರಡು ಕಣ್ಣು ಸಾಲದು. ಅಕ್ಕ ಈಗಾಗಲೇ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದರೆ ತಂಗಿ ಕಿರುತೆರೆಯ ಜನಪ್ರಿಯ ನಟಿ.
ಸೋನುಗೌಡ, ನೇಹಾಗೌಡ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಮುದ್ದಾದ ಅಕ್ಕತಂಗಿಯರು - ಪರಮೇಶಿ ಪಾನ್ವಾಲ
'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ಸೋನುಗೌಡ ಬೆಳ್ಳಿತೆರೆಗೆ ಕಾಲಿಟ್ಟರೆ ತಂಗಿ ನೇಹಾ ಗೌಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಮೂಲಕ ಮನೆಮಾತಾದರು. ಅಕ್ಕ ಬೆಳ್ಳಿತೆರೆ, ತಂಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಮೇಕಪ್ ರಾಮಕೃಷ್ಣ ಮಕ್ಕಳು ಸೋನುಗೌಡ ಮತ್ತು ನೇಹಾ ಗೌಡ ಇಬ್ಬರೂ ಇದೀಗ ರಾಜ್ಯದ ಜನರಿಗೆ ಬಹಳ ಪರಿಚಿತ ನಟಿಯರು. ಇಂತಿ ನಿನ್ನ ಪ್ರೀತಿಯ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸುರಸುಂದರಿ ಸೋನು ಗೌಡ ಮುಂದೆ ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಾದರೂ ಪ್ರೇಕ್ಷಕರ ಮನ ಗೆದ್ದಿದ್ದರು. ಪರಮೇಶಿ ಪಾನ್ವಾಲ, ಗುಲಾಮ, ಪೋಲಿಸ್ ಕ್ವಾಟರ್ಸ್, ಗೋವಾ, ಕಾನೂರಾಯಣ, ಗುಳ್ಟು, ಕಿರಗೂರಿನ ಗಯ್ಯಾಳಿಗಳು, ಒಂಥರಾ ಬಣ್ಣಗಳು, ಫಾರ್ಚುನರ್, ಶಾಲಿನಿ ಐಪಿಎಸ್ ಚಿತ್ರಗಳಲ್ಲಿ ಸೋನು ನಟಿಸಿದ್ದಾರೆ. ಇನ್ನು ಕಿರುತೆರೆಯ ಗೊಂಬೆ ಎಂದೇ ತಂಗಿ ನೇಹಾ ಜನಪ್ರಿಯ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಶ್ರುತಿ ಆಲಿಯಾಸ್ ಗೊಂಬೆ ಆಗಿ ಗಮನ ಸೆಳೆಯುತ್ತಿರುವ ಈಕೆ ನೃತ್ಯಗಾರ್ತಿಯೂ ಹೌದು. ತಕಧಿಮಿತ ರಿಯಾಲಿಟಿ ಶೋ ಮೂಲಕ ತಮ್ಮ ನೃತ್ಯದ ರಸದೌತಣವನ್ನು ವೀಕ್ಷಕರಿಗೆ ಉಣ ಬಡಿಸಿದ್ದರು.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮುದ್ದು ಬೆಡಗಿ ಗೊಂಬೆ ಕಳೆದ ವರ್ಷ ಚಂದನ್ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಳ್ಳಿತೆರೆಯಲ್ಲಿ ಚೆಂದುಳ್ಳಿ ಚೆಲುವೆ ಅಕ್ಕ ಸೋನು ಗೌಡ ಬ್ಯುಸಿಯಾಗಿದ್ದರೆ ತಂಗಿ ನೇಹಾ ಗೌಡ ಸದ್ಯ ಕಿರುತೆರೆಯಲ್ಲಿ ಬ್ಯುಸಿ. ನೇಹಾ ಇತರ ಧಾರಾವಾಹಿಗಳಲ್ಲಿ ನಟಿಸಿದ್ದರೂ ಈಗ ಅವರು ಗೊಂಬೆ ಎಂದೇ ಪರಿಚಿತ. ಹೆಚ್ಚಿನವರಿಗೆ ಅವರು ನೇಹಾ ಗೌಡ ಎಂಬುದೇ ತಿಳಿದಿಲ್ಲ. ಅಷ್ಟರ ಮಟ್ಟಿಗೆ ಗೊಂಬೆ ಪಾತ್ರ ಜನರನ್ನು ಆವರಿಸಿಬಿಟ್ಟಿದೆ. ನಟನಾ ರಂಗದಲ್ಲಿ ಬೆಳೆಯುತ್ತಿರುವ ಈ ಮುದ್ದಾದ ಅಕ್ಕ ತಂಗಿಯರಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂಬುದು ಅಭಿಮಾನಿಗಳ ಹಾರೈಕೆ.