ಕಳೆದ 52 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಂದು ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹಾಡುಗಳನ್ನು ಕೇಳದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರೂ ಅವರ ಹಾಡುಗಳನ್ನು ಕೇಳಿದ್ದಾರೆ.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನಗಾರುಡಿಗನ ಬಗ್ಗೆ ಬಹಳಷ್ಟು ಜನಕ್ಕೆ ತಿಳಿಯದ ಕೆಲವೊಂದು ವಿಚಾರಗಳು, ವಿಶೇಷತೆಗಳು ಇಲ್ಲಿವೆ.
ಯಾವುದೇ ತರಬೇತಿ ಇಲ್ಲದೆ ಸುಮಾರು 40,000 ಹಾಡುಗಳನ್ನು ಹಾಡಿರುವ ಎಸ್ಪಿಬಿ 60 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಕೂಡಾ ಮಾಡಿದ್ದಾರೆ. ಅವರದ್ದು 55 ವರ್ಷಗಳ ಸಿನಿಮಾ ಜರ್ನಿ.
ತಮ್ಮ ಹಾಡುಗಳಿಂದಲೇ ಗಿನ್ನಿಸ್ ದಾಖಲೆ ಬರೆದಿರುವ ಎಸ್ಪಿಬಿ ಯಾವುದೇ ಹಾಡಾದರೂ 15 ನಿಮಿಷದಲ್ಲಿ ಅರ್ಥ ಮಾಡಿಕೊಂಡು ಹಾಡುತ್ತಿದ್ದರು. ಯಾವುದೇ ನಟನಿಗಾದರೂ ಎಸ್ಪಿಬಿ ಅವರ ಧ್ವನಿ ಹೋಲುತ್ತಿತ್ತು. ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರ ಚಿತ್ರಗಳಿಗೂ ಎಸ್ಪಿಬಿ ಹಾಡಿದ್ದಾರೆ.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ ತಂದೆ ತಾಯಿಗಳಿಗೆ ಎಂಟು ಮಕ್ಕಳು. ಮೂವರು ಗಂಡು ಹಾಗೂ ಐದು ಹೆಣ್ಣು ಮಕ್ಕಳಲ್ಲಿ ಬಾಲು ಒಬ್ಬರು. ತಂದೆ ಹರಿಕಥಾ ವಿದ್ವಾನ್ ಸಾಂಬಮೂರ್ತಿ. ಪುತ್ರ ಇಂಜಿನಿಯರ್ ಆಗಲಿ ಎಂಬುದು ತಂದೆ ಆಸೆ. ಎಎಂಐಇ ತರಬೇತಿ ಪಡೆಯಲು ಸೇರಿದರೆ ಅಲ್ಲಿ ಕೂಡಾ ಹಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ ಎಸ್ಪಿಬಿ.
ಶಾಲಾ ದಿನಗಳಲ್ಲಿ ಇವರ ವಿಜ್ಞಾನ ಶಿಕ್ಷಕರು ಎಸ್ಪಿಬಿ ಧ್ವನಿ ಇಷ್ಟಪಟ್ಟು ಟೇಪ್ ರೆಕಾರ್ಡರ್ನಲ್ಲಿ ಹಾಡೊಂದನ್ನು ರೆಕಾರ್ಡ್ ಮಾಡಿದರು. 15 ಡಿಸೆಂಬರ್ 1966 ರಲ್ಲಿ ಮೊದಲ ಬಾರಿಗೆ ಸ್ಟುಡಿಯೋದಲ್ಲಿ ಹಾಡಿದರು. 1964 ರಲ್ಲಿ ಅವರೇ ಬರೆದು ರಾಗ ಸಂಯೋಜಿಸಿದ ಹಾಡು 'ರಾಗಮ್ ಅನುರಾಗಮ್'. ಆಂಧ್ರ ಸೋಷಿಯಲ್ ಅ್ಯಂಡ್ ಕಲ್ಚರಲ್ ಅಸೋಸಿಯೇಷನ್ ಸ್ಪರ್ಧೆಯಲ್ಲಿ ಬಾಲು ಮೊದಲ ಬಹುಮಾನ ಪಡೆದರು. ಸ್ಥಳದಲ್ಲೇ ಇದ್ದ ಎಸ್.ಪಿ. ಕೋದಂಡಪಾಣಿ 17 ವರ್ಷದ ಬಾಲು ಅವರನ್ನು ಕರೆದು ಅವರ ಬಗ್ಗೆ ವಿಚಾರಿಸಿದರು. ಅವರಿನ್ನೂ ಚಿಕ್ಕ ವಯಸ್ಸಿನವರಾದ ಕಾರಣ ಅವಕಾಶಕ್ಕಾಗಿ 2 ವರ್ಷಗಳು ಕಾಯಬೇಕಾಯ್ತು.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ 1966 ರಲ್ಲಿ ನಿರ್ದೇಶಕ ಕೋದಂಡಪಾಣಿ ಅವರ ಶ್ರೀ ಶ್ರೀ ಶ್ರೀ 'ಮರ್ಯಾದಾ ರಾಮಣ್ಣ' ಚಿತ್ರಕ್ಕೆ ಏಮಿ ಈವಿಂತಾ ಮೋಹಮು...ಹಾಡಿಗೆ ಪಿ.ಬಿ. ಶ್ರೀನಿವಾಸ್, ರಘುರಾಮಯ್ಯ, ಪಿ ಸುಶೀಲಾ ಜೊತೆಗೆ ಎಸ್ಪಿಬಿ ಹಾಡಿದ್ದರು. ಹಾಗೆ ನೋಡಿದರೆ ಎಸ್ಪಿಬಿ ಅವರು ಹಾಡಬೇಕಿದ್ದ ಹಾಡನ್ನು ಘಂಟಸಾಲ ಹಾಡಬೇಕಿತ್ತು. ಆದರೆ ನಿರ್ದೇಶಕ ಕೋದಂಡಪಾಣಿ ಎಸ್ಪಿಬಿ ಅವರನ್ನೇ ಆಯ್ಕೆ ಮಾಡಿಕೊಂಡರು. ಅದಕ್ಕೆ ಕಾರಣ ಮೊದಲ ಟೇಕ್ನಲ್ಲೇ ಎಸ್ಪಿಬಿ ಹಾಡು ಓಕೆ ಆಗಿತ್ತು.
ಬಾಲು ಅವರು ಹಾಡಿದ ಎರಡನೇ ಹಾಡೇ 'ನಕ್ಕರೆ ಅದೇ ಸ್ವರ್ಗ' ಕನ್ನಡ ಚಿತ್ರಕ್ಕೆ. ಎಂ. ರಂಗರಾವ್ ಅವರು ಎಸ್ಪಿಬಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮೊದಲು ಪರಿಚಯಿಸಿದರು. ಅದೇ ರೀತಿ ಅವರನ್ನು ತೆಲುಗಿನಲ್ಲಿ ಸೋಲೋ ಹಾಡು ಹಾಡಲು ಅವಕಾಶ ನೀಡಿದವರು ಕೆ.ವಿ. ಮಹಾದೇವನ್ ಎಂಬ ದಿಗ್ಗಜ ಸಂಗೀತ ನಿರ್ದೇಶಕ.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮಿಳಿನ ಎಂಜಿಆರ್ ಅಭಿನಯದ 'ಅಡಿಮೈ ಪೆನ್' ಚಿತ್ರದಿಂದ ಎಸ್ಪಿಬಿ ಅದೃಷ್ಟದ ಬಾಗಿಲು ತೆರೆಯಿತು. ಆಗ ಎಸ್ಪಿಬಿ ಅವರಿಗೆ ಜ್ವರ ಬಂದಿದ್ದರಿಂದ ಕೆ. ವಿ.ಮಹಾದೇವನ್ ಇವರಿಗಾಗಿ ಒಂದು ತಿಂಗಳು ಕಾದಿದ್ದರು. ಖ್ಯಾತ ತೆಲುಗು ನಿರ್ದೇಶಕ ದಾಸರಿ ನಾರಾಯಣ ರಾವ್ ಎಸ್ಪಿಬಿ ಪ್ರತಿಭೆಯನ್ನು ಕಂಡು ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿದ್ದರು. ಅದೇ 'ಕನ್ಯಾ ಕುಮಾರಿ' ಚಿತ್ರ.
ಎಸ್ಪಿಬಿ ಅವರಲ್ಲಿ ಅಭಿನಯ ಕಲೆ ಅಡಗಿದೆ ಎಂದು ಪತ್ತೆ ಹಚ್ಚಿ ಕ್ಯಾಮರಾ ಮುಂದೆ ತರಲು ಕಾರಣ ಕಮಲ ಹಾಸನ್. ಕೇಲಡಿ ಕಣ್ಮಣಿ, ತಲೈ ವಾಸನ್, ತ್ಯಾಗು, ಕಾದಲನ್, ಕಾದಲ್ ದೇಶಂ, ರಕ್ಷಕಮ್, ಪವಿತ್ರ ಬಂಧಮ್, ಪ್ರೇಮ, ಮೈನಾ, ಕನ್ನಡದ ಮುದ್ದಿನ ಮಾವ ಸೇರಿ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ವೇದಿಕೆ ಮೇಲೆ ಮಹಮ್ಮದ್ ಬಿನ್ ತುಘಲಕ್ ನಾಟಕವನ್ನು ಕೂಡಾ ಎಸ್ಪಿಬಿ ಪ್ರದರ್ಶಿಸಿದ್ದರು.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ದೊಡ್ಡ ಗಾಯಕ ಆಗಿದ್ದರೂ ಐಸ್ಕ್ರೀಮ್ ಹಾಗೂ ಜ್ಯೂಸನ್ನು ಸೇವಿಸುತ್ತಿದ್ದರು. ದಕ್ಷಿಣ ಭಾರತದ ಹಾಡುಗಾರರಲ್ಲಿ ವೋಕಲ್ ಕಾರ್ಡ್ ಸರ್ಜರಿ ಮಾಡಿಸಿಕೊಂಡ ಮೊದಲ ನಟ ಎಸ್ಪಿಬಿ. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರು. 25 ವರ್ಷಗಳಲ್ಲಿ 50 ವರ್ಷದಲ್ಲಿ ಹೇಳುವಷ್ಟು ಹಾಡುಗಳನ್ನು ಹಾಡಿದ್ದಾರೆ ಎಸ್ಪಿಬಿ. ಅವರ ಬಹಳ ವರ್ಷದ ಕನಸು ಘಂಟಸಾಲ ಅವರ ಪ್ರತಿಮೆ ಸ್ಥಾಪನೆ ಆಗಬೇಕು ಎಂಬುದು. ಈ ಪ್ರತಿಮೆ ಉದ್ಘಾಟನೆಗೆ ಅವರು 1993 ರಲ್ಲಿ ಲತಾ ಮಂಗೇಶ್ಕರ್ ಅವರನ್ನು ಕರೆಸಿದ್ದರು. ಆ ಸ್ಥಳವನ್ನು ಆಂಧ್ರ ಪ್ರದೇಶ ಸರ್ಕಾರ ಕೊಟ್ಟದ್ದನ್ನು ಬಿಟ್ಟರೆ ಉಳಿದ ಎಲ್ಲಾ ವೆಚ್ಚವನ್ನು ಎಸ್ಪಿಬಿ ಅವರೇ ಭರಿಸಿದ್ದರು.
ಎಸ್ಪಿಬಿ ಅವರ ಗುರು ಕೋದಂಡಪಾಣಿ ಹೆಸರಿನಲ್ಲಿ ಸ್ಟುಡಿಯೋವೊಂದನ್ನು ಕೂಡಾ ಎಸ್ಪಿಬಿ ಹೊಂದಿದ್ದರು. ಇದಕ್ಕೆ ಕೋದಂಡಪಾಣಿ ಆಡಿಯೋ ಥಿಯೇಟರ್ ಎಂದು ಹೆಸರಿಟ್ಟಿದ್ದರು ಇದಕ್ಕೆ ಅವರ ಸ್ನೇಹಿತ ರಾಧಾಕೃಷ್ಣ ಸಹಾಯ ಮಾಡಿದ್ದರು.
ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮ್ಮ ಸಹೋದರಿ ಎಸ್ಪಿ ಶೈಲಜ ಅವರಿಗೆ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿಲ್ಲ ಎಂಬ ವಿಚಾರ ಎಸ್ಪಿಬಿ ಅವರಿಗೆ ಸ್ವಲ್ಪ ಬೇಸರ ತಂದಿತ್ತು. ಸಹೋದರಿಗಾಗಿ ಕಮಲ್ ಹಾಸನ್ ಅಭಿನಯದ 'ಶುಭಸಂಕಲ್ಪಮ್' ಎಂಬ ಸಿನಿಮಾ ಮಾಡಿದರು. ಆ ಚಿತ್ರದಲ್ಲಿ ಎಲ್ಲಾ ಹಾಡುಗಳನ್ನು ಶೈಲಜ ಹಾಡಿದ್ದರು.
ಬಾಲಿವುಡ್ ಚಿತ್ರರಂಗದಲ್ಲಿ 'ಏಕ್ ದುಜೆ ಕೆ ಲಿಯೇ' ಚಿತ್ರದ ಮೂಲಕ ಹವಾ ಸೃಷ್ಟಿಸಿದರು ಎಸ್ಪಿಬಿ. 'ಹಮ್ ಆಪ್ ಕೆ ಹೈ ಕೌನ್' ಚಿತ್ರಕ್ಕಾಗಿ ಒಂದೇ ದಿನದಲ್ಲಿ 8 ಹಾಡುಗಳನ್ನು ಹಾಡಿದ್ದರು. ಆದರೆ ಆ ಚಿತ್ರದ ಹಾಡಿಗಾಗಿ ಕುಮಾರ್ ಸಾನು ಅವರಿಗೆ ಪ್ರಶಸ್ತಿ ಬಂದಾಗ ಎಸ್ಪಿಬಿ ಸ್ವಲ್ಪವೂ ಬೇಸರ ಮಾಡಿಕೊಂಡಿರಲಿಲ್ಲ.
ಎಸ್ಪಿಬಿ 'ಲೀವ್ ಅಂಡ್ ಲೆಟ್ ಲೀವ್' ಪಾಲಿಸಿಯನ್ನು ರೂಢಿಸಿಕೊಂಡು ಬಂದವರು. ನನ್ನ ಧ್ವನಿ ನನಗೆ ಹಿಡಿಸುತ್ತಿಲ್ಲ ಎಂದು ತಿಳಿದ ತಕ್ಷಣ ನಾನು ಹಾಡುವುದನ್ನು ನಿಲ್ಲಿಸುತ್ತೇನೆ ಎಂದು ಎಸ್ಪಿಬಿ 1995 ರಲ್ಲೇ ಹೇಳಿಕೊಂಡಿದ್ದರು.