ಕಿರುತೆರೆ ನಟ ಸ್ಕಂದ ಅಶೋಕ್ ಬಗ್ಗೆ ಗೊತ್ತಾ ಎಂದು ಕೇಳಿದರೆ ವೀಕ್ಷಕರು ಒಂದು ಕ್ಷಣ ತಬ್ಬಿಬ್ಬಾಗಬಹುದು. ಆದರೆ, ರಾಧಾ ರಮಣ ಧಾರಾವಾಹಿಯ ಹಿರೋ ರಮಣ್ ಗೊತ್ತಾ ಎಂದು ಕೇಳಿದರೆ ಗೊತ್ತಿಲ್ಲದವರೇ ಇಲ್ಲ. ಹೆಚ್ಚಿನ ವೀಕ್ಷಕರಿಗೆ ರಮಣ್ ಪಾತ್ರಧಾರಿಯ ನಿಜವಾದ ಹೆಸರು ಸ್ಕಂದ ಎಂಬುದೇ ತಿಳಿದಿಲ್ಲ! ಯಾಕೆಂದರೆ ಇಂದಿಗೂ ಆತ ರಮಣ್ ಎಂದೇ ಪರಿಚಿತ.
ಇದೀಗ ಸ್ಕಂದ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇನ್ಸ್ಟಾಗ್ರಾಂನಲ್ಲಿ ಫೋಟೋ ಹರಿದಾಡುತ್ತಿದೆ. ಅಂದ ಹಾಗೇ ಸ್ಕಂದ ಅವರು ಯಾವುದೇ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಜಾಹೀರಾತಿಗಾಗಿ. ಹೌದು, ಅದನ್ನು ಸ್ವತಃ ಸ್ಕಂದ ಅವರೇ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.