ಸ್ಯಾಂಡಲ್‌ವುಡ್‌ನಲ್ಲಿ ಟೀಸರ್ ಹಾಗೂ ಹಾಡುಗಳಿಂದಲೇ ಹವಾ ಸೃಷ್ಟಿಸಿರೋ ಬಹು ನಿರೀಕ್ಷಿತ ಚಿತ್ರ 'ಸಲಗ' ಸದ್ಯ ಯೂಟೂಬ್ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಆನೆ ನಡೆದಿದ್ದೇ ದಾರಿ ಎಂಬ ಅಡಿ ಬರಹದೊಂದಿಗೆ ನಟನೆಯ ಜೊತೆ ನಿರ್ದೇಶನಕ್ಕೂ ದುನಿಯಾ ವಿಜಯ್ ಕೈ ಹಾಕಿದ್ದಾರೆ. ಸ್ಯದ್ಯ ಚಿತ್ರತಂಡ ಪ್ರಮೋಷನಲ್ ಸಾಂಗ್‌ವೊಂದನ್ನ ಬಿಡುಗಡೆ ಮಾಡಿದೆ.'ಟಿಣಿಂಗ ಮಿಣಿಂಗ ಟಿಶ್ಯಾ' ಹಾಡಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನ ವೀಕ್ಷಣೆ ಮಾಡಿದ್ದಾರೆ.
ಈ ಹಾಡನ್ನ ಯಲ್ಲಾಪುರದ ಸಿದ್ದಿ ಬುಡಕಟ್ಟು ಜನಾಂಗದ ಗಿರಿಜಾ ಸಿದ್ದಿ ಹಾಗೂ ಗೀತಾ ಸಿದ್ದಿ ಎಂಬುವರು ಹಾಡಿದ್ದಲ್ಲದೆ, ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಹಾಡಿನ ಮುಖ್ಯ ರೂವಾರಿ ಆಗಿರುವ ಗಿರಿಜಾ ಸಿದ್ದಿ ಈಟಿವಿ ಭಾರತ ಜೊತೆ, ಈ ಹಾಡಿನ ಹುಟ್ಟು ಆಗಿದ್ದು ಹೇಗೆ ಎಂಬುದನ್ನ ಸಂಪೂರ್ಣ ಹಂಚಿಕೊಂಡಿದ್ದಾರೆ.
'ಟಿಣಿಂಗ ಮಿಣಿಂಗ ಟಿಶ್ಯಾ' ಗಾಯಕಿ ಗಿರಿಜಾ ಎನ್ ಹೇಳ್ತಾರೆ ಗೊತ್ತಾ..! ಜಾನಪದ ಗಾಯನ ಜೊತೆಗೆ ಗಿರಿಜಾ ಸಿದ್ದಿ ಶಾಸ್ತ್ರೀಯ ಸಂಗೀತವನ್ನು ಸಹ ಕಲಿತಿದ್ದಾರೆ. ಸಿದ್ದಿ ಬುಡಕಟ್ಟು ಜನಾಂಗದ ಹಾಡಾಗಿರುವ ಟಿಣಿಂಗಾ, ಮಿಣಿಂಗಾ, ಟಿಶ್ಯಾ ಹಾಡನ್ನ ಸಲಗ ಸಿನಿಮಾದಲ್ಲಿ ಬಳಿಸಿಕೊಳ್ಳೋದಕ್ಕೆ ಕಾರಣ, ಗಿರಿಜಾ ಪತಿಯಂತೆ. ಸಲಗ ಚಿತ್ರದಲ್ಲಿ ಗಿರಿಜಾ ಪತಿ ಚನ್ನಕೇಶವ ಅಭಿನಯಿಸಿದ್ದಾರೆ. ಈ ಮೂಲಕ ಗಿರಿಜಾ ಪರಿಚಯವಾಗಿತ್ತು. ಅಲ್ಲದೆ, ಜಾನಪದ ಗಾಯಕಿ ಅಂತಾ ಗೊತ್ತಾಗಿ ವಿಜಯ್ ಸಲಗ ಚಿತ್ರದಲ್ಲಿ ಹಾಡಿಸಲು ನಿರ್ಧರಿಸಿಸದ್ದರಂತೆ
ಅದಕ್ಕಾಗಿ ವಿಜಯ್ ಸಿದ್ದಿ ಬುಡಕಟ್ಟು ಜನಾಂಗ ಇರುವ ಕಾಡಿಗೆ ಹೋಗಿ, ಹಾಡನ್ನ ಕೇಳಿದ ಬಳಿಕ ಸಲಗ ಚಿತ್ರದಲ್ಲಿ ಹಾಡಿಸಿದ್ರಂತೆ. ಮೊದಲು ಗಾಯಕಿ ಗಿರಿಜಾ ಸಿದ್ದಿಗೆ, ಭಯ ಇತ್ತಂತೆ. ಈ ಹಾಡನ್ನ ಬೇರೆಯವರಿಗೆ ಮಾರಿಕೊಂಡರೆ ಹೇಗೆ ಎನ್ನುವ ಅನುಮಾನ ಆದ್ರೆ, ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಗಿರಿಜಾಗೆ ನಂಬಿಕೆ ಬಂದಂತೆ. ಅಲ್ಲದೆ ಗಾಯಕಿಯಾಗಬೇಕು ಎನ್ನುವ ಗಿರಿಜಾರ ಬಹುದಿನದ ಕನಸು ಸಹ ಈಡೇರಿದ್ದು, ಇದರ ಸಂಪೂರ್ಣ ಕ್ರೆಡಿಟ್ ದುನಿಯಾ ವಿಜಯ್ಗೆ ಹೋಗಬೇಕು ಅಂತಾರೆ ಗಿರಿಜಾ ಸಿದ್ದಿ.
ಹಾಡನ್ನ ಫೈವ್ ಸ್ಟಾರ್ ಹೋಟೆಲ್ನಲ್ಲಿ, ನಮ್ಮ ಕೈಯಲ್ಲಿ ಹಾಡಿಸಿ, ಡ್ಯಾನ್ಸ್ ಮಾಡಿಸಿದ್ದು, ತುಂಬಾನೇ ಖುಷಿಯಾಗಿದೆ. ಈ ಹಾಡಿನಿಂದ ಈಗ ನಮ್ಮ ಸಮುದಾಯದ ಗೌರವ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಹಾಡುವ ಅವಕಾಶ ಸಿಕ್ಕರೆ ಖಂಡಿತಾ ಹಾಡುತ್ತೀನಿ ಅಂತಾ ಗಿರಿಜಾ ಸಿದ್ದಿ ಹೇಳಿಕೊಂಡಿದ್ದಾರೆ. ಜಾನಪದ ಹಾಗೂ ಶಾಸ್ತ್ರೀಯ ಸಂಗೀತದ ಹಿಡಿತ ಇರುವ ಗಿರಿಜಾ ಸಿದ್ದಿಗೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ಅವಕಾಶ ಸಿಗಲಿ ಅನ್ನೋದು ಎಲ್ಲರ ಆಶಯ.