ಗಡಿನಾಡು ಬೀದರ್ ಜಿಲ್ಲೆಯಲ್ಲಿ ಜನಿಸಿರುವ ಬಿರಾದಾರ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು.1980 ರಲ್ಲಿ ತೆರೆಕಂಡ 'ಬರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿ ಇವರು ಇದುವರೆಗೆ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು ಮೂರೂವರೆ ದಶಕಗಳಿಂದ ಕಲಾದೇವತೆಯ ಸೇವೆ ಮಾಡಿಕೊಂಡಿರುವ ಬಿರಾದಾರ್, ಸರಳ ವ್ಯಕ್ತಿತ್ವದ ಮನುಷ್ಯ. ಯಾವುದಕ್ಕೂ ಆಸೆ ಪಡದೆ, ಇದ್ದಿದ್ದರಲ್ಲೇ ಸಂಸಾರದ ನೌಕೆ ಸಾಗಿಸುತ್ತಿದ್ದಾರೆ. ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬುದು ಇವರ ಆಸೆ. ಆದರೆ, ಈ ಬಗ್ಗೆ ನಂಗೆ ಕೊರಗಿಲ್ಲ ಎಂದು ಮೊನ್ನೆಯಷ್ಟೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡ್ರು. ಅವರ ಈ ತೂಕದ ಮಾತು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.
39 ವರ್ಷಗಳಲ್ಲಿ 350 ಚಿತ್ರಗಳಲ್ಲಿ ನಟನೆ...ಇಂದಿಗೂ ಸ್ಕೂಟರ್ಲ್ಲೇ ಶೂಟಿಂಗ್ಗೆ ಬರ್ತಾರೆ ಬಿರಾದಾರ್ - ಶೂಟಿಂಗ್
ಬೆಳ್ಳಿ ಪರದೆಯ ಮೇಲೆ ರಂಗು - ರಂಗಾಗಿ ಕಾಣಿಸಿಕೊಳ್ಳುವ ಸಾಕಷ್ಟು ಕಲಾವಿದರ ಬಾಳು ಮಾತ್ರ ಬ್ಲ್ಯಾಕ್ ಅಂಡ್ ವೈಟ್ ಆಗಿರುತ್ತದೆ. ನೂರು-ಇನ್ನೂರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಕೆಲ ನಟರ ಜೀವನ ಸಂಕಷ್ಟದಲ್ಲಿರುವುದನ್ನು ನಾವು ನೋಡಿದ್ದೇವೆ. ಇಂತಹವರ ಸಾಲಿಗೆ ರಾಷ್ಟ್ರಪ್ರಶಸ್ತಿ ವಿಜೇತ ಹಾಸ್ಯ ನಟ ವೈಜನಾಥ್ ಬಿರಾದಾರ್ ಅವರು ಸೇರಿಕೊಳ್ಳುತ್ತಾರೆ.
ಚಿತ್ರರಂಗಕ್ಕೆ ಬಂದ ಸಾಕಷ್ಟರು ಕಲಾವಿದರ ಒಂದೆರಡು ವರ್ಷಗಳಲ್ಲೇ ಐಷಾರಾಮಿ ಕಾರಿನಲ್ಲಿ ಓಡಾಡುವುದನ್ನು ಕಾಣಬಹುದು. ಆದರೆ, ವೈಜನಾಥ್ ಮಾತ್ರ ಇಂದಿಗೂ ಕೂಡ ಹಳೇ ಸ್ಕೂಟರ್ನಲ್ಲೇ ಚಿತ್ರೀಕರಣದ ಸ್ಥಳಗಳಿಗೆ ಬರುತ್ತಾರೆ. ಕೊಟ್ಟ ಪಾತ್ರವನ್ನ ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ.
ಗಿರೀಶ್ ಕಾಸರವಳ್ಳಿಯವರ ಬಿಸಿಲು ಕುದುರೆಯನ್ನೇರಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ ಇವರು ರಾಷ್ಟ್ರಪ್ರಶಸ್ತಿಯನ್ನೂ ಪಡೆಯುತ್ತಾರೆ. ಹೀಗೆ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಈ ನಟನಿಗೆ ಹುಟ್ಟುಹಬ್ಬದ ಸಂಭ್ರಮ. ನಿನ್ನೆ (ಜೂನ್ 26) 67 ನೇ ವಸಂತಕ್ಕೆ ಕಾಲಿಟ್ಟರು. ಚಿತ್ರರಂಗದ ಗಣ್ಯರು ಈ ಅದ್ಭುತ ಕಲಾವಿದನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.