'ಹಳ್ಳಿಮೇಷ್ಟ್ರು' ಸಿನಿಮಾ ಎಂದರೆ ನೆನಪಾಗುವುದು ಸಿಲ್ಕ್ ಸ್ಮಿತಾ. ನಾಯಕಿಯಾಗಲು ಚಿತ್ರರಂಗಕ್ಕೆ ಬಂದ ಸಿಲ್ಕ್ ಸ್ಮಿತಾ ಆದದ್ದು ಮಾತ್ರ ಡ್ಯಾನ್ಸರ್. ಬಂದ ಅವಕಾಶಗಳನ್ನು ಒಪ್ಪಿಕೊಳ್ಳದೆ ಆಕೆಗೆ ಬೇರೆ ದಾರಿ ಇರಲಿಲ್ಲ. ಆದರೂ ಆಕೆ ಡ್ಯಾನ್ಸ್ ಹಾಗೂ ಮಾದಕ ಮೈಮಾಟದಿಂದಲೇ ಹುಡುಗರ ಎದೆಗೆ ಕಿಚ್ಚು ಹೊತ್ತಿಸಿದ ನಟಿ.
ತೆರೆ ಮೇಲೆ ಗ್ಲ್ಯಾಮರ್ ಡಾಲ್ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ - Hallimestru fame silk smitha
ದಕ್ಷಿಣ ಭಾರತದ ಖ್ಯಾತ ನಟಿ, ಡ್ಯಾನ್ಸರ್ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ 'ಅವಳ್ ಅಪ್ಪಡಿತಾನ್' ಹೆಸರಿನಲ್ಲಿ ತೆರೆಗೆ ಬರಲಿದೆ. ಕೆ.ಎಸ್. ಮಣಿಕಂಠನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ನವೆಂಬರ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಸಿಲ್ಕ್ ಸ್ಮಿತಾ ಜೀವನದ ಕೆಲವೊಂದು ವಿಚಾರಗಳನ್ನು ವಿದ್ಯಾ ಬಾಲನ್ ಅಭಿನಯದ 'ಡರ್ಟಿ ಪಿಕ್ಚರ್' ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿತ್ತು. 2011 ರಲ್ಲಿ ಬಿಡುಗಡೆಯಾದ ಈ ಸಿನಿಮಾ ವಿದ್ಯಾ ಬಾಲನ್ ಅವರ ವೃತ್ತಿ ಜೀವನದಲ್ಲೂ ದೊಡ್ಡ ಹೆಸರು ತಂದುಕೊಟ್ಟಿತು. ಅತ್ಯುತ್ತಮ ನಟಿ ಪ್ರಶಸ್ತಿ ಕೂಡಾ ದೊರೆಯಿತು. ಇದೀಗ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾವೊಂದು ತಮಿಳಿನಲ್ಲಿ ತಯಾರಾಗುತ್ತಿದೆ. ಕೆ.ಎಸ್. ಮಣಿಕಂಠನ್ ನಿರ್ದೇಶನದ ಈ ಚಿತ್ರಕ್ಕೆ 'ಅವಳ್ ಅಪ್ಪಡಿತಾನ್' ಎಂದು ಹೆಸರಿಡಲಾಗಿದೆ. ಗಾಯತ್ರಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಣನ್ ಹಾಗೂ ಮುರಳಿ ಸಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಮುರಳಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
'ಅವಳ್ ಅಪ್ಪಡಿತಾನ್' ಚಿತ್ರೀಕರಣ ನವೆಂಬರ್ನಲ್ಲಿ ಆರಂಭವಾಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ ಚಿತ್ರತಂಡ ಸಿಲ್ಕ್ ಸ್ಮಿತಾ ಹಾಗೂ ಇನ್ನಿತರ ಪಾತ್ರಕ್ಕೆ ಸೂಕ್ತ ಕಲಾವಿದರನ್ನು ಹುಡುಕುತ್ತಿದೆ.