ಕನ್ನಡದ ಬಹಳಷ್ಟು ನಾಯಕಿಯರು ಮದುವೆ, ಮಕ್ಕಳು, ಸಂಸಾರ ಎಂದು ಕೆಲವು ವರ್ಷ ಜವಾಬ್ದಾರಿ ಮುಗಿಸಿಕೊಂಡು ಮತ್ತೆ ನಟನೆಗೆ ವಾಪಸಾಗಿ ಮೊದಲಿದ್ದ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಉದಾಹರಣೆಗಳಿವೆ. ಅಂತಹ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್ ಕೂಡಾ ಒಬ್ಬರು.
ಮಗುವಾದ ನಂತರವೂ ನಟನೆಗೆ ಸಿದ್ಧರಾದ ಸಿಂಪಲ್ ನಟಿ, ಪೊಲೀಸ್ ಪಾತ್ರಧಾರಿಯಾಗಿ 2ನೇ ಇನ್ನಿಂಗ್ಸ್ ಶುರು - ನಟನೆಗೆ ವಾಪಸಾದ್ರು ಶ್ವೇತಾ ಶ್ರೀವಾತ್ಸವ್
ಮದುವೆ, ಮಗು ಎಂದು ಕಳೆದ ಮೂರು ವರ್ಷಗಳಿಂದ ಆ್ಯಕ್ಟಿಂಗ್ನಿಂದ ದೂರ ಇದ್ದ ನಟಿ ಶ್ವೇತಾ ಶ್ರೀವಾತ್ಸವ್ ಇದೀಗ ಮತ್ತೆ ನಟನೆಗೆ ವಾಪಸಾಗಿದ್ದಾರೆ. ‘ರಹದಾರಿ‘ ಎಂಬ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ.
‘ಪ್ರಾರ್ಥನೆ’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಶ್ವೇತಾ, ನಂತರ ಸಿಂಪಲ್ ಸುನಿ ನಿರ್ದೇಶನದ ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಮೂಲಕ ನಾಯಕಿಯಾಗಿ ಪ್ರಮೋಷನ್ ಪಡೆದರು. ನಂತರ ಸೈಬರ್ ಯುಗದೊಳ್, ಫೇರ್ ಆ್ಯಂಡ್ ಲವ್ಲಿ, ಆತ್ಮಸಾಕ್ಷಿ ಸಿನಿಮಾಗಳಲ್ಲಿ ಅವರು ನಟಿಸಿದರೂ ಸಿನಿಮಾ ಅಂತ ಯಶಸ್ಸು ಗಳಿಸಲಿಲ್ಲ. ನಂತರ ಅವರಿಗೆ ಬ್ರೇಕ್ ನೀಡಿದ್ದು 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ. ನಂತರ ಅವರು ಗರ್ಭಿಯಾಗಿದ್ದರಿಂದ ನಟನೆಯಿಂದ ದೂರ ಸರಿದರು. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಶ್ವೇತಾಗೆ ಅಶ್ಮಿತಾ ಎಂಬ 2 ವರ್ಷದ ಮುದ್ದಾದ ಹೆಣ್ಣು ಮಗು ಇದೆ.
ಇದೀಗ ಮೂರು ವರ್ಷಗಳ ಗ್ಯಾಪ್ ನಂತರ ಗಿರೀಶ್ ವೈರಮುಡಿ ನಿರ್ದೇಶನದ 'ರಹದಾರಿ' ಸಿನಿಮಾದಲ್ಲಿ ಶ್ವೇತಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರೀಶ್ ಈಗಾಗಲೇ ‘ಒಂದ್ ಕಥೆ ಹೇಳ್ಳಾ‘ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 'ರಹದಾರಿ' ಸಿನಿಮಾದಲ್ಲಿ ‘ಬೆಲ್ ಬಾಟಮ್‘ ಚಿತ್ರದಂತೆಯೇ ಸಸ್ಪೆನ್ಸ್ ಇದೆಯಂತೆ. ಬಸವರಾಜು ಹಾಗೂ ಮಂಜುನಾಥ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ.