ಶುಭಾ ಪೂಂಜ 'ಅಂಬುಜಾ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ವರ್ಷದ ಆರಂಭದಲ್ಲೇ ಸುದ್ದಿಯಾಗಿತ್ತು. ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಶುಭಾ ಬಿಗ್ಬಾಸ್ಗೆ ತೆರಳಿದ್ರು. ಬಳಿಕ ಕೊರೊನಾ, ಲಾಕ್ಡೌನ್ ಅಂತೆಲ್ಲ ಚಿತ್ರ ತಡವಾಗಿ, ಇದೀಗ ಕೊನೆಗೂ ಅಕ್ಟೋಬರ್ನಲ್ಲಿ ಪ್ರಾರಂಭವಾಗುವುದಕ್ಕೆ ಸಜ್ಜಾಗಿದೆ. ಇಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ.
ವಿಶೇಷ ಎಂದರೆ, ಈ ಚಿತ್ರದಲ್ಲಿ ಬರುವ ಲಂಬಾಣಿ ಗೆಟಪ್ನಲ್ಲಿ ಶುಭಾ ಪೂಂಜ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ವಸ್ತ್ರ ಹಾಗೂ ಆಭರಣಗಳನ್ನು ಗದಗ ಜಿಲ್ಲೆಯ ಒಂದು ಲಂಬಾಣಿ ತಾಂಡಾದಲ್ಲಿ ಸುಮಾರು 4 ತಿಂಗಳು ಸಮಯ ತೆಗೆದುಕೊಂಡು ತಯಾರು ಮಾಡಲಾಗಿದೆ. ಈ ಕಾಸ್ಟ್ಯೂಮ್ ತೂಕ 20 ಕೆ.ಜಿಯಂತೆ. ಲಂಬಾಣಿ ದಿರಿಸು ತೊಟ್ಟು ಶುಭಾ ಪೂಂಜ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಶುಭಾ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಅವರು ಕ್ರೈಮ್ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರಂತೆ. ಅಂಬುಜಾ ಒಂದು ಮಹಿಳಾ ಪ್ರಧಾನ ಹಾಗೂ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಕೆಲವು ದಿನಗಳ ನಂತರ ಎಂಬ ಸಾಮಾಜಿಕ ಕಳಕಳಿಯ ಚಿತ್ರ ನಿರ್ದೇಶಿಸಿದ್ದ ಶ್ರೀನಿ ಹನುಮಂತರಾಜು ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ.