ಕರ್ನಾಟಕ

karnataka

ETV Bharat / sitara

ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ ಮನೆಗೆ ಭೇಟಿ ನೀಡಿದ ಶ್ರುತಿ, ಸುಧಾರಾಣಿ, ಮಾಳವಿಕಾ! - ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ

ಇದೀಗ ಕನ್ನಡ ಚಿತ್ರರಂಗದ ಏಳು ದಶಕಗಳ ಕಾಲ,1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ ಅವರನ್ನು ಶ್ರುತಿ, ಸುಧಾರಾಣಿ ಹಾಗೂ ಮಾಳವಿಕಾ ಅವಿನಾಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಎಂಎನ್ ಲಕ್ಷ್ಮಿದೇವಿ ಮನೆಗೆ ಭೇಟಿ ನೀಡಿದ ನಟಿಯರು
ಎಂಎನ್ ಲಕ್ಷ್ಮಿದೇವಿ ಮನೆಗೆ ಭೇಟಿ ನೀಡಿದ ನಟಿಯರು

By

Published : Sep 24, 2021, 12:47 PM IST

ಅರವತ್ತು ಎಪ್ಪತ್ತರ ದಶಕದಲ್ಲಿ, ಬ್ಲ್ಯಾಕ್ ಅಂಡ್ ವೈಟ್​ ದಿನಗಳಲ್ಲಿ ಕನ್ನಡದ ಬೆಳ್ಳಿ ತೆರೆ ಮೇಲೆ ಅದೆಷ್ಟೋ ನಟಿಮಣಿಯರು, ಸ್ಟಾರ್ ನಟಿಯಾಗಿ ಮಿಂಚಿದ್ದಾರೆ. ಆ ನಟಿಮಣಿಯರು ಈಗ ವಯಸ್ಸಾದಂತೆ, ವಿಶ್ರಾಂತಿ ಜೀವನವನ್ನ ಕಳೆಯುತ್ತಿದ್ದಾರೆ. ಆದರೆ ಅದೆಷ್ಟೋ ಹಿರಿಯ ನಟ, ನಟಿಯರು ಏನು ಮಾಡ್ತಿದ್ದಾರೆ, ಎಲ್ಲಿ ಇದ್ದಾರೆ? ಅವರ ಆರೋಗ್ಯ ಹೇಗಿದೆ ಎನ್ನುವುದರ ಬಗ್ಗೆ ಮಾಹಿತಿಯೇ ಇರುವುದಿಲ್ಲ.

ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಸೇರಿ, ಹಿರಿಯ ಕಲಾವಿದರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುತ್ತಿರುವುದರ ಮೂಲಕ, ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಅಭಿನಯ ಶಾರದೆ ಜಯಂತಿ ನಿಧನದ ಬಳಿಕ, ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ, ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದ ಹಿರಿಯ ನಟಿ ಲೀಲಾವತಿ ಮನೆಗೆ ತೆರೆಳಿ, ಅವರ ಆರೋಗ್ಯ ವಿಚಾರಿಸಿ, ಗೌರವಿಸಿದ್ದರು.

ಅಷ್ಟೇ ಅಲ್ಲಾ ಲೀಲಾವತಿ ಜೊತೆ ಊಟ ಮಾಡಿ, ಒಂದು ದಿನ ಕಾಲ ಕಳೆದಿದ್ದರು. ಇದೀಗ ಕನ್ನಡ ಚಿತ್ರರಂಗದ ಏಳು ದಶಕಗಳ ಕಾಲ,1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ ಅವರನ್ನು ಶ್ರುತಿ, ಸುಧಾರಾಣಿ ಹಾಗು ಮಾಳವಿಕಾ ಅವಿನಾಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಎಂಎನ್ ಲಕ್ಷ್ಮಿದೇವಿ ಮನೆಗೆ ಭೇಟಿ ನೀಡಿದ ಶ್ರುತಿ, ಸುಧಾರಾಣಿ, ಮಾಳವಿಕಾ

ಹೌದು ಯಾರು ಯಾರು ನೀ ಯಾರು ಎಂದರೆ, ಸರಸ್ವತಿಯ ವರಪುತ್ರಿ ಅಂತಾ ಹೇಳುವ ಎಂಎನ್ ಲಕ್ಷ್ಮಿದೇವಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಸಮಯ ಕಳೆದಿದ್ದಾರೆ. ಅವರ ಜೊತೆ ಕಾಫಿ ಕುಡಿದು, ಅವರಿಗೆ ಪುಟ್ಟದಾಗಿ ಸನ್ಮಾನ ಮಾಡಲಾಗಿದೆ. ಈ ಸಮಯದಲ್ಲಿ ಹಿರಿಯ ನಟಿ ಎಂ.ಎನ್ ಲಕ್ಷ್ಮಿ ದೇವಿ ತಮ್ಮ ಹಳೆ ಕಾಲದ ನೆನಪುಗಳನ್ನ ಮೆಲುಕು ಹಾಕಿ ಸಂತಸ ಪಟ್ಟಿದ್ದಾರೆ.

ಇನ್ನು ಎಂ.ಎನ್.ಲಕ್ಷ್ಮಿದೇವಿ ಅಮ್ಮನವರು. ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಅಸಮಾನ್ಯವಾದದ್ದು. ಪೋಷಕ ಪಾತ್ರಗಳಿಗೆ ಒಂದು ವಿಭಿನ್ನ ರೀತಿಯ ಮೆರುಗು ತಂದುಕೊಟ್ಟ ಕಲಾವಿದರ ಪೈಕಿ ಎಂ.ಎನ್ ಲಕ್ಷ್ಮಿದೇವಿಯವರು ಕೂಡ ಒಬ್ಬರು. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಬಹಳ ದೊಡ್ಡದು ಇದೆ. ಈ ಬಗ್ಗೆ ಹಿರಿಯ ನಟಿ ಶ್ರುತಿ ಸಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದೆಯಲ್ಲಿ ಎಂಎನ್ ಲಕ್ಷ್ಮಿದೇವಮ್ಮ ಅವರು ಕೂಡ ಒಬ್ಬರು. ನನ್ನ ತಂದೆ ಹಾಗೂ ತಾಯಿಯಂದಿರು ಗುಬ್ಬಿ ಕಂಪನಿಯಲ್ಲಿ ಇದ್ದಾಗ ಅವರೊಂದಿಗೆ ನಟಿಸಿ ಹಲವಾರು ವರ್ಷಗಳ ಅವರೊಂದಿಗೆ ಇದ್ದಂತಹ ಅನುಭವ ನನ್ನ ಪೋಷಕರಿಗೆ ಇದೆ. ಹಾಗೆ ನಾನು ಕೂಡ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂದಿಗೆ ಅವರನ್ನು ನೋಡುವಾಗ ಬಹಳ ಹೆಮ್ಮೆ ಅನಿಸುತ್ತದೆ.

ಜೀವನದ ಎಲ್ಲ ಏಳು ಬೀಳುಗಳನ್ನು ಅತ್ಯಂತ ಧೈರ್ಯವಾಗಿ ನಿಭಾಯಿಸಿ ಗಟ್ಟಿಯಾಗಿ ನಿಂತ ಕಲಾವಿದೆ ಇವರು. ಈ ಕಲಾ ಕುಟುಂಬ ಹೀಗೆ ಕಲಾಸೇವೆಯಲ್ಲಿ ಮುಂದುವರೆಯಲಿ ಲಕ್ಷ್ಮಿ ಅಮ್ಮನಿಗೆ ದೇವರು ಇನ್ನಷ್ಟು ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎನ್ನುವುದೇ ನಮ್ಮೆಲ್ಲರ ಆಶಯ ಎಂದು ಶ್ರುತಿ ಬರೆದುಕೊಂಡಿದ್ದಾರೆ.

ABOUT THE AUTHOR

...view details