ಪೊಗರು ಖ್ಯಾತಿಯ ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಕೆ.ಮಂಜು ಅವರ ಮಗ ಶ್ರೇಯಸ್ ನಟಿಸುತ್ತಿರುವುದು ಗೊತ್ತಿರುವ ವಿಷಯವೇ.. ಲಾಕ್ಡೌನ್ಗೂ ಮುನ್ನವೇ ಹೊಸಪೇಟೆಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿತ್ತು. ಬಹುಶಃ ಲಾಕ್‌ಡೌನ್ ಇಲ್ಲದಿದ್ದರೆ ಇಷ್ಟೊತ್ತಿಗೆ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿರುತ್ತಿತ್ತು. ಆದರೆ, ಅವೆಲ್ಲವೂ ಉಲ್ಟಾ ಆಗಿದೆ.
ಈಗ ಚಿತ್ರ ತಂಡದಿಂದ ಎರಡು ಹೊಸ ಅಪ್ಡೇಟ್ಗಳು ಬಂದಿವೆ. ಪ್ರಮುಖವಾಗಿ ಜುಲೈ 1ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಅದರ ಮುಂದಿನ ವಾರವೇ, ಅಂದರೆ ಜುಲೈ 7ರಂದು ಗವಿಪುರಂನ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.
ಸದ್ಯಕ್ಕೆ ಯಾವುದೇ ಹೊಸ ಚಿತ್ರದ ಮುಹೂರ್ತ ಆದ ಸುದ್ದಿ ಬಂದಿಲ್ಲ. ಒಂದು ವೇಳೆ ಜುಲೈ 7ರವರೆಗೂ ಯಾವುದೇ ಹೊಸ ಚಿತ್ರದ ಮುಹೂರ್ತವಾಗದಿದ್ದರೆ, ಶ್ರೇಯಸ್ ಅಭಿನಯದ ಈ ಚಿತ್ರವು ಲಾಕ್‌ಡೌನ್ ನಂತರ ಪ್ರಾರಂಭವಾದ ಮೊದಲ ಚಿತ್ರವಾಗಲಿದೆ.