ಕನ್ನಡ ಸಿನಿ ರಸಿಕರಿಗೆ ಹೊಸತನದ ಸಿನಿಮಾವನ್ನು ನೀಡಿದ ಪವನ್ ಕುಮಾರ್ ನಿರ್ದೇಶನದ ಯುಟರ್ನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರದ್ಧಾ ಶ್ರೀನಾಥ್ ಸೌತ್ ಇಂಡಿಯಾದಲ್ಲಿ ಸದ್ಯ ಬಹು ಬೇಡಿಕೆಯ ನಟಿ.
ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿರುವ ಶ್ರದ್ಧಾ ಭಾನುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ಇದೇ ವೇಳೆ ನಿರ್ಮಾಪಕ ಸಂದೇಶ್ ನಾಗರಾಜ್ರನ್ನೂ ಶ್ರದ್ಧಾ ಮೀಟ್ ಮಾಡಿದ್ದಾರೆ.
ಡಿಬಾಸ್ ಭೇಟಿಯನ್ನು ಶ್ರದ್ಧಾ ಟ್ವಿಟರ್ನಲ್ಲಿ ಫೋಟೋ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಸಂಡೇ ಅಂದ್ರೆ ಹೀಗಿರ್ಬೇಕು ಎಂದು ಖುಷಿಯಾಗಿ ಯುಟರ್ನ್ ಬೆಡಗಿ ಟ್ವೀಟ್ ಮಾಡಿದ್ದಾರೆ.
ಶ್ರದ್ಧಾ ಡಿಬಾಸ್ ಭೇಟಿ ಚಂದನವನದಲ್ಲಿ ಕುತೂಹಲ ಮೂಡಿಸಿದ್ದು, ಇವರಿಬ್ಬರು ಜೊತೆಯಾಗಿ ನಟಿಸಲಿದ್ದಾರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ನಟಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಸದ್ಯ ಶ್ರದ್ಧಾ ಶ್ರೀನಾಥ್ ಕನ್ನಡದಲ್ಲಿ ನೀನಾಸಂ ಸತೀಶ್ ನಟನೆಯ ಗೋಧ್ರಾ ಹಾಗೂ ಶಿವಣ್ಣ ಜೊತೆಗಿನ ರುಸ್ತುಂನಲ್ಲಿ ನಟಿಸಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಶ್ರದ್ಧಾ ತಮಿಳಿನಲ್ಲಿ ಅಜಿತ್ ಜೊತೆಗೆ ನಟಿಸುತ್ತಿದ್ದು, ಇದು ಹಿಂದಿಯ ಪಿಂಕ್ ಚಿತ್ರದ ರಿಮೇಕ್. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಜೊತೆಗೆ ಜೆರ್ಸಿ ಸಿನಿಮಾದಲ್ಲಿ ನಟಿಸಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದೆ.