ಸಿನಿಮಾಗಾಗಿ ಎಷ್ಟೋ ಬಾರಿ ಕೆಲವೊಂದು ವಿದ್ಯೆಗಳನ್ನು ಕಲಿಯಬೇಕಾಗುತ್ತದೆ. ಅದರಲ್ಲಿ ಸಹಜತೆ ಇರಲು ಕೆಲವು ನಾಯಕಿಯರು ಡ್ಯೂಪ್ ಬಳಸದೆ ತಾವೇ ಕ್ಯಾಮರಾ ಮುಂದೆ ಬರುತ್ತಾರೆ. ಆದರೆ ಈ ವೇಳೆ ಅವರಿಗೆ ತೊಂದರೆಗಳಾಗುವುದುಂಟು.
ನಾಯಕಿ ಶ್ರದ್ದಾ ಶ್ರೀನಾಥ್ಗೆ ಕೂಡಾ ಇದೇ ಅನುಭವ ಆಗಿದೆ. ಶ್ರದ್ಧಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 3 ವರ್ಷದ ಹಿಂದಿನ ವಿಚಾರವೊಂದನ್ನು ಪ್ರಸ್ತಾಪ ಮಾಡಿದ್ದಾರೆ. ಬೈಕ್ ಓಡಿಸುವಾಗ ಸ್ಕಿಡ್ ಆಗಿ ತಾವು ಕೆಳಗೆ ಬಿದ್ದ ವಿಡಿಯೋ ತುಣುಕೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಕೃಷ್ಣ ಅ್ಯಂಡ್ ಹಿಸ್ ಲೀಲಾ' ಎಂಬ ತೆಲುಗು ಸಿನಿಮಾ ಚಿತ್ರೀಕರಣ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಬರೆದುಕೊಂಡಿರುವ ಶ್ರದ್ಧಾ 2017 ಜೂನ್ 'ಕೃಷ್ಣ ಅ್ಯಂಡ್ ಹಿಸ್ ಲೀಲಾ' ಚಿತ್ರೀಕರಣದ ವೇಳೆ ನಂದಿಹಿಲ್ಸ್ ಬಳಿ ರಸ್ತೆಗಳು ಒದ್ದೆಯಾಗಿದ್ದವು. ನನಗೆ ಬೈಕ್ ರೈಡಿಂಗ್ ಬರದಿದ್ದರೂ ಶಾಟ್ ನೈಜವಾಗಿ ಬರಬೇಕೆಂಬ ಉದ್ಧೇಶದಿಂದ ನಿರ್ದೇಶಕ ರವಿ ಪೆರಪು ಅವರ ಬಳಿ ಬೈಕ್ ಹೇಗೆ ಚಲಾಯಿಸುವುದು ಎಂದು ಕೇಳಿಕೊಂಡು ಕಲಿತುಕೊಂಡೆ. ಶಾಟ್ ವೇಳೆ ಬೈಕ್ ಹಿಡಿದು ರೆಡಿಯಾದೆ. ನನ್ನ ಸಹಾಯಕ ಪ್ರಶಾಂತ್ ನನ್ನ ಚಲನವಲನವನ್ನು ರೆಕಾರ್ಡ್ ಮಾಡುತ್ತಿದ್ದರು. ಬೈಕ್ ಕ್ರಾಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಆಯ ತಪ್ಪಿ ಕೆಳಗೆ ಬಿದ್ದೆ. ನಾನು ಕೆಳಗೆ ಬಿದ್ದೊಡನೆ ಅಲ್ಲಿದ್ದವರೆಲ್ಲಾ ನನಗೆ ಏನೋ ಆಯಿತು ಎಂದುಕೊಂಡು ಹೆದರಿ ಓಡಿಬಂದರು ಎಂದು ಶ್ರದ್ಧಾ ತಮಗಾದ ಅನುಭವ ಹೇಳಿಕೊಂಡಿದ್ದಾರೆ.
'ಕೃಷ್ಣ ಅ್ಯಂಡ್ ಹಿಸ್ ಲೀಲಾ'
ಇಂದು 'ಕೃಷ್ಣ ಅ್ಯಂಡ್ ಹಿಸ್ ಲೀಲಾ' ಸಿನಿಮಾ ಓಟಿಟಿಯಲ್ಲಿ ಪ್ರಸಾರವಾಗಲಿದೆ. ರವಿಕಾಂತ್ ಪರೆಪು ನಿರ್ದೇಶನದ ಈ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ, ಶ್ರದ್ದಾ ಶ್ರೀನಾಥ್, ಸೀರತ್ ಕಪೂರ್, ಶಾಲಿನಿ ವದ್ನಿಕತ್ತಿ ಹಾಗೂ ಇತರರು ಇದ್ದಾರೆ. ಸುರೇಶ್ ಪ್ರೊಡಕ್ಷನ್, ವಯಕಾಮ್ 18 ಮತ್ತು ಸಂಜಯ್ ರೆಡ್ಡಿ ಈ ಚಿತ್ರದ ನಿರ್ಮಾಕರು, ಶ್ರೀ ಚರಣ್ ಪಕಲ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.