ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ವಿರುದ್ಧ ಕರುನಾಡ ಚಕ್ರವರ್ತಿ ಶಿವರಾಜ ಕುಮಾರ್ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಪ್ರಸಕ್ತ ವರ್ಷಗಳ ಪ್ರಶಸ್ತಿ ಹಂಚಿಕೆ ಸರಿಯಾಗಿಲ್ಲ ಎಂದು ಶಿವಣ್ಣನ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೈಮಾ ಅವಾರ್ಡ್ ಆಯ್ಕೆ ಮಂಡಳಿ ವಿರುದ್ಧ ಕಿಡಿಕಾರುತ್ತಿರುವ ಫ್ಯಾನ್ಸ್, ಯೋಗ್ಯ ಚಿತ್ರಗಳಿಗೆ ಪ್ರಶಸ್ತಿ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ.
'ಟಗರು' ಮಡಿಲಿಗೆ ಒಂದೇ ಪ್ರಶಸ್ತಿ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು 100 ದಿನಗಳ ಅಮೋಘ ಪ್ರದರ್ಶನ ಕಂಡು ದಾಖಲೆ ಬರೆದ ಚಿತ್ರ. ನಿರ್ದೇಶಕ ಸುಕ್ಕಾ ಸೂರಿ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಶನ್ ಟಗರು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇಂತಹ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಈ ಬಾರಿ ಒಂದೇ ಒಂದು ಸೈಮಾ ಅವಾರ್ಡ್ ಸಿಕ್ಕಿದೆ. ಈ ಚಿತ್ರದಲ್ಲಿ ಖಳನಾಯಕ ಪಾತ್ರ ನಿಭಾಯಿಸಿದ್ದ ಡಾಲಿ ಧನಂಜಯ್ ಅವರಿಗೆ ಸೈಮಾ ಅತ್ಯುತ್ತಮ ಖಳನಟ ಪ್ರಶಸ್ತಿಗೆ ನೀಡಲಾಗಿದೆ. ಸಹಜವಾಗಿಯೇ ಇದು ಶಿವಣ್ಣನ ಅಭಿಮಾನಿಗಳು ಕೆರಳಿಸಿದೆ.
ನಟ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಟ್ವಿಟ್ಟರ್ಲ್ಲಿ ಸೈಮಾ ವಿರೋಧಿ ಚಳುವಳಿ ಶುರುಮಾಡಿ, ಅರ್ಹ ಚಿತ್ರಕ್ಕೆ ಪ್ರಶಸ್ತಿ ನೀಡಿಲ್ಲ ಎಂದು ಧಿಕ್ಕಾರ ಕೂಗುತ್ತಿದ್ದಾರೆ. ಪ್ರಶಸ್ತಿ ಆಯ್ಕೆ ಮುನ್ನ ಸಿನಿಮಾಗಳನ್ನು ನಿಷ್ಪಕ್ಷಪಾತವಾಗಿ ವೀಕ್ಷಿಸಬೇಕಾಗಿದ್ದು ನಿಮ್ಮ ಕರ್ತವ್ಯ ಎಂದು ತರಾಟೆಗೆ ತೆಗೆದುಕೊಂಡಿರುವ ಅಭಿಮಾನಿಗಳು, ಪ್ರಶಸ್ತಿ ಆಯ್ಕೆ ತಂಡಕ್ಕೆ ಓಪನ್ ಚಾಲೆಂಜ್ ಹಾಕಿದ್ದಾರೆ. ಈಗಲೂ ನಮ್ಮ ಜತೆ ಟಗರು ಸಿನಿಮಾ ನೋಡಿ, ಎಲ್ಲಾ ವಿಭಾಗದಲ್ಲಿಯೂ ಟಗರು ಅತ್ಯುತ್ತಮ ಚಿತ್ರ ಹೇಗೆ ಎಂಬುದನ್ನು ಸಾಬೀತು ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.