ಖಾಸಗಿ ವಾಹಿನಿಯಲ್ಲಿ ಆ್ಯಂಕರ್ ಆಗಿದ್ದ ಶೀತಲ್ ಶೆಟ್ಟಿ ಮರೆಯುದುಂಟೇ? ನಿತ್ಯ ನ್ಯೂಸ್ ಓದುವಾಗಲೂ ನಾನು ಶೀತಲ್ ಶೆಟ್ಟಿ ಎಂದು ಹೇಳುತ್ತಿದ್ದ ಈ ಮುದ್ದು ಮುಖದ ಚೆಲುವೆ ವಾಯ್ಸ್ಕೇಳುವುದೇ ಸೊಗಸಾಗಿತ್ತು. ವಾರ್ತಾ ವಾಚಕಿಯಾಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಆಕೆ ಮುಂದೆ ಬಯಸಿದ್ದು ಬ್ರೇಕ್! ಅದಕ್ಕೆ ಆಕೆ ಆಯ್ದುಕೊಂಡಿದ್ದು ನಟನಾ ಕ್ಷೇತ್ರ.
ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಶೀತಲ್ ಶೆಟ್ಟಿ 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡ ಶೀತಲ್ ವೀಕ್ಷಕರಿಗೆ ತುಂಬಾ ಹತ್ತಿರವಾದದ್ದು, ಬಿಗ್ ಬಾಸ್ ಸ್ಫರ್ಧಿಯಾದ ಬಳಿಕ. ಅಲ್ಲಿಂದ ಬಂದ ನಂತರ ಪತಿ ಬೇಕು ಡಾಟ್ ಕಾಮ್ನಲ್ಲಿ ನಟಿಸಿದ ಶೀತಲ್ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಈಗಾಗಲೇ ಸಂಗಾತಿ ಎನ್ನುವ ಕಿರುಚಿತ್ರವನ್ನು ರಚಿಸಿದ್ದ ಶೀತಲ್ ಶೆಟ್ಟಿ ಇದೀಗ ಮತ್ತೊಂದು ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. 'ಕಾರು' ಎಂಬ ಹೆಸರಿನ ಈ ಕಿರುಚಿತ್ರ ಇದೇ ಡಿಸೆಂಬರ್ 15 ರಂದು ಬಿಡುಗಡೆಯಾಗಲಿದೆ.
ಪುಟ್ಟ ಹುಡುಗಿಯನ್ನು ಒಂದು ಕಾರು ಕಾಡುತ್ತಿರುತ್ತೆ, ಆಗ ಆಕೆ ಏನಾಗಬಹುದು ಎಂಬುದೇ ಕಾರು ಕಿರುಚಿತ್ರದ ಮೂಲಕಥೆ. ಈ ಕಿರುಚಿತ್ರವು ಪ್ರತಿಯೊಬ್ಬರಿಗೂ ತಮ್ಮ ಬಾಲ್ಯವನ್ನು ಮತ್ತೊಮ್ಮೆ ಮರುಕಳಿಸುವುದಂತೂ ನಿಜ ಅಂತಾರೆ ಶೀತಲ್.
ಮೀಡಿಯಾ ಮನೆ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿರುವ ಕಾರು ಕಿರುಚಿತ್ರಕ್ಕೆ ಶಿವು ಮತ್ತು ಪಚ್ಚಿ ಸಹಾಯಕ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಋತ್ವಿಕ್ ಸಂಕಲನ, ಅನಂತ ಕಾಮತ್ ಸಂಗೀತ ನಿರ್ದೇಶನ ಇರುವ ಈ ಕಿರುಚಿತ್ರಕ್ಕೆ 'ನಡುವೆ ಅಂತರವಿರಲಿ' ಸಿನಿಮಾ ಖ್ಯಾತಿಯ ಯೋಗಿಶ್ವರ್ ಛಾಯಾಗ್ರಹಣ ಮಾಡಿದ್ದಾರೆ.