ಮಾಡರ್ನ್ ರೈತ ಎಂದೇ ಕರೆಸಿಕೊಳ್ಳುವ ಬಿಗ್ ಬಾಸ್ ಸೀಸನ್ 6ರ ವಿನ್ನರ್ ಶಶಿಕುಮಾರ್ ಮೊದಲಿನಿಂದಲೂ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸದ್ಯ ಆಧುನಿಕ ಕೃಷಿಯಲ್ಲಿಯೇ ತೊಡಗಿಸಿಕೊಂಡಿರುವ ಶಶಿಕುಮಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
'ಕೃಷಿ ಅಲ್ಲದೇ ಬೇರೆ ಕ್ಷೇತ್ರಗಳಲ್ಲಿಯೂ ನಾವು ಆದಾಯದ ಸಂಗತಿಗಳ ಕುರಿತು ಚಿಂತಿಸಬೇಕೆಂದು ಜನರ ಬಳಿ ನಾನು ಯಾವಾಗಲೂ ಹೇಳುತ್ತೇನೆ. ನಾನು ಕೃಷಿಯನ್ನು ಆಯ್ದುಕೊಂಡಾಗ ಅದನ್ನು ಆದಾಯ ಬರುವಂತಹ ವ್ಯವಹಾರವಾಗಿ ರೂಪಿಸಬೇಕೆನ್ನುವ ಉತ್ಸಾಹ ಇತ್ತು. ಇದಕ್ಕಾಗಿ ಇಡೀ ಕರ್ನಾಟಕವನ್ನು ಸುತ್ತಬೇಕು. ರೈತರನ್ನು ಭೇಟಿ ಮಾಡಬೇಕು. ನಮ್ಮ ಅನುಭವಗಳನ್ನು ಹೇಳಬೇಕು ಎಂಬುದೇ ನನಗಿದ್ದ ದೊಡ್ಡ ಆಸೆಯಾಗಿತ್ತು. ಅಂದ ಹಾಗೇ ಯಾವುದೇ ಕ್ಷೇತದಲ್ಲಿಯೇ ಆದರೂ ಜ್ಞಾನ ಪಡೆಯುವುದೊಂದೇ ನನಗಿದ್ದ ಗುರಿ' ಎನ್ನುತ್ತಾರೆ ಶಶಿಕುಮಾರ್.
ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಳವಾದ ಅಧ್ಯಯನ ಅಗತ್ಯ : ಶಶಿಕುಮಾರ್ "ಅಂದ ಹಾಗೇ ನಾನು ಸಿನಿಮಾಗಳಲ್ಲಿ ನಟಿಸಲು ತೊಡಗಿದಾಗ ಫೈಟಿಂಗ್ ಹಾಗೂ ಡಬ್ಬಿಂಗ್ ಕ್ಲಾಸ್ಗಳಿಗೆ ಹೋಗಿದ್ದೆ. ಆ ಮೂಲಕ ಅದರ ರೀತಿ ನೀತಿಗಳನ್ನು ತಿಳಿದುಕೊಂಡೆ. ನಂತರ ಕೃಷಿಗೆ ಬಂದಾಗ ಒಳ್ಳೆಯ ಫಸಲು ಹೊಂದಿರುವ ರೈತರನ್ನು ಭೇಟಿಯಾದೆ. ವಿವಿಧ ಬೆಳೆಗಳ ಬಗ್ಗೆ ತಿಳಿಯುವುದು ಇಚ್ಛೆಯಾಗಿತ್ತು. ಅದೇ ಕಾರಣದಿಂದಲೇ ಇತ್ತೀಚೆಗೆ ನಾನು ಕಾಫಿ ಬೆಳೆಗಳ ಬಗ್ಗೆ ತಿಳಿಯಲು ಚಿಕ್ಕಮಗಳೂರಿಗೆ ಹೋಗಿದ್ದೆ" ಎನ್ನುವ ಶಶಿಕುಮಾರ್ ಯಾವುದೇ ವಿಷಯವಾಗಿದ್ದರೂ ಆಳವಾಗಿ ಅಧ್ಯಯನ ಮಾಡಿದ ಮೇಲೆಯೇ ಮುಂದುವರಿಯುುತ್ತೇನೆ.
"ಲಾಕ್ ಡೌನ್ ನಂತರ ತುಂಬಾ ಜನ ಕೃಷಿಯತ್ತ ವಾಲುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಸ್ಯಾಂಡಲ್ವುಡ್ನಲ್ಲಿ ದರ್ಶನ್, ಉಪೇಂದ್ರ ಹಾಗೂ ಸೀರಿಯಲ್ ಕಲಾವಿದರು ಕೂಡಾ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಉತ್ತಮ ಲಕ್ಷಣ. ಪುಷ್ಕರ್ ಮಲ್ಲಿಕಾರ್ಜುನ ಕೂಡಾ ಕೃಷಿಯತ್ತ ಆಸಕ್ತಿ ತೋರಿದ್ದಾರೆ. ನಾನು ನನಗೆ ಗೊತ್ತಿರೋ ವಿಚಾರಗಳನ್ನು ಅವರೊಡನೆ ಹಂಚಿಕೊಂಡದ್ದೇನೆ" ಎನ್ನುತ್ತಾರೆ ಬಿಗ್ ಬಾಸ್ ವಿನ್ನರ್ ಶಶಿಕುಮಾರ್.