ಪ್ರೇಮಕಥೆಗಳಿಗೆ ಫೇಮಸ್ ಆದವರು ಶಶಾಂಕ್. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಕೆಲವು ಪ್ರೇಮಕಥೆಗಳಿರುವ ಚಿತ್ರಗಳನ್ನು ನಿರ್ದೇಶಿಸಿದ್ದ ಶಶಾಂಕ್, ಇತ್ತೀಚೆಗೆ ಪ್ರೇಮಕಥೆಯಿಂದ ದೂರವೇ ಇದ್ದರು.
ತಾಯಿಗೆ ತಕ್ಕ ಮಗ ಚಿತ್ರವಾದ ಮೇಲೆ ಉಪೇಂದ್ರ ಅಭಿನಯದಲ್ಲಿ ಒಂದು ಫ್ಯಾಮಿಲಿ ಕಥೆಯನ್ನು ತರುವುದಕ್ಕೆ ಹೊರಟಿದ್ದರು. ಆದರೆ, ಅವರ ಪ್ಲಾನ್ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಉಪೇಂದ್ರ ಅಭಿನಯದ ಚಿತ್ರವನ್ನು ಸ್ವಲ್ಪ ಮುಂದಕ್ಕೆ ಹಾಕಿರುವ ಅವರು, ಈ ಗ್ಯಾಪ್ನಲ್ಲಿ ಇನ್ನೊಂದು ಲವ್ ಸ್ಟೋರಿಯನ್ನು ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ.
ಲಾಕ್ಡೌನ್ಗೂ ಮುನ್ನವೇ ಪ್ರವೀಣ್ ಎಂಬ ಹೊಸಪೇಟೆಯ ಹುಡುಗನ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ಆದರೆ ಲಾಕ್ಡೌನ್ನಿಂದಾಗಿ ಈ ಚಿತ್ರ ಸ್ವಲ್ಪ ತಡವಾಗಿದ್ದು, ಆಗಸ್ಟ್ನಲ್ಲಿ ಸೆಟ್ಟೇರುವುದಕ್ಕೆ ಸಿದ್ಧವಾಗುತ್ತಿದೆ. ಈ ಮಧ್ಯೆ ಶಶಾಂಕ್ ತಮ್ಮ ಹೊಸ ಸಿನಿಮಾಕ್ಕೆ 'ಲವ್ 360' ಎಂಬ ಹೆಸರಿಟ್ಟಿದ್ದು, ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ.
ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ. ನಾಯಕ, ನಾಯಕಿಯನ್ನು ಅದೆಷ್ಟು ಪ್ರೀತಿಸುತ್ತಾನೆ ಮತ್ತು ಯಾವೆಲ್ಲಾ ಆ್ಯಂಗಲ್ಗಳಿಂದ ಪ್ರೀತಿಸುತ್ತಾನೆ ಎಂದು ಹೇಳುವುದಕ್ಕೆ ಈ ಹೆಸರನ್ನು ಇಡಲಾಗಿದೆಯಂತೆ. ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಒಂದೇ ಹಂತದಲ್ಲಿ ನಡೆಯಲಿದೆ.
ಪ್ರವೀಣ್ಗೆ ನಾಯಕಿಯಾಗಿ ಹೊಸ ಹುಡುಗಿಯನ್ನು ಪರಿಚಯಿಸಲಾಗುತ್ತಿದ್ದು, ಈಗಾಗಲೇ ಆಡಿಷನ್ ಶುರುವಾಗಿದೆಯಂತೆ. ಚಿತ್ರಕ್ಕೆ ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ:'ನಟ್ವರ್ ಲಾಲ್' ಆದ ಮಡಮಕ್ಕಿ ಹೀರೋ ತನುಷ್!