ಮಾಲಿವುಡ್ ನಟ ನಿವಿನ್ ಪೌಲಿ ನಾಯಕ ಹಾಗೂ ಶಾನ್ವಿ ಶ್ರೀವಾತ್ಸವ ನಾಯಕಿಯಾಗಿ ನಟಿಸಿರುವ ಮೊದಲ ಮಲಯಾಳಂ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ 'ಮಹಾವಿರ್ಯಾರ' ಎಂಬ ಟೈಟಲ್ ಇಡಲಾಗಿದ್ದು, ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಖ್ಯಾತ ಲೇಖಕ ಎಂ. ಮುಕುಂದನ್ ಫಸ್ಟ್ ಲುಕ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭಕೋರಿದ್ದಾರೆ.
ನಿವಿನ್ ಪೌಲಿ ಜೊತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆ. ಟೈಮ್ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರ ಮಾತನಾಡಲಿದೆ. ವಿಶೇಷ ಏನೆಂದರೆ, ಈ ಹಿಂದೆ ನಿವಿನ್ ಜೊತೆಗೆ ‘1983‘ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್, 'ಮಹಾವಿರ್ಯಾರ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಮೂರನೇ ಬಾರಿ ಒಂದಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿವಿನ್ ಮತ್ತು ಆಸಿಫ್ ಅಲಿ ಜೋಡಿ ದಶಕದ ಬಳಿಕ ಒಂದಾಗಿದೆ.
ಮಹಾವಿರ್ಯಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಚಿತ್ರದಲ್ಲಿ ಲಾಲ್, ಲಾಲು ಅಲೆಕ್ಸ್, ಸಿದ್ದೀಕಿ, ಶಾನ್ವಿ ಶ್ರೀವಾತ್ಸವ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್ ಕುರುಪ್, ಸುಧೀರ್ ಕರಾಮನ, ಪದ್ಮರಾಜನ್ ರತೀಶ್, ಸುಧೀರ್ ಪರವೂರ್ ಸೇರಿ ಹಲವರು ನಟಿಸಿದ್ದಾರೆ. ಕೊರೊನಾ ಹಾವಳಿ ನಡುವೆಯೂ ದೊಡ್ಡ ಬಜೆಟ್ನ ಈ ಸಿನಿಮಾದ ಶೂಟಿಂಗ್ ರಾಜಸ್ಥಾನ, ಕೇರಳ ಸೇರಿ ಹಲವೆಡೆ ನಡೆದಿದ್ದು, ಚಂದ್ರು ಸೆಲ್ವರಾಜ್ ಛಾಯಾಗ್ರಹಣ ಮಾಡಿದ್ದಾರೆ.
ಮಹಾವಿರ್ಯಾರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ. ನಿವಿನ್ ಅವರ ಹೋಮ್ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ಅಡಿ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್. ಶ್ಯಾಮ್ನಾಸ್ ಅವರ ಇಂಡಿಯನ್ ಮೂವಿ ಮೇಕರ್ಸ್ ಸಂಸ್ಥೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ:ಪುಷ್ಪ ಸಿನಿಮಾ ಮಾದರಿಯಲ್ಲೇ ಸಂಚಾರಿ ವಿಜಯ್ ಅಭಿನಯದ 'ಮೇಲೊಬ್ಬ ಮಾಯಾವಿ' ಚಿತ್ರ