ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಅತಿ ಹೆಚ್ಚು ಚಿತ್ರಗಳ ನಿರ್ಮಾಣವಾಗಿದೆ ಎಂಬ ಹೆಗ್ಗಳಿಕೆ ಸಿಕ್ಕಿದೆ. ಸುಮಾರು 243 ಚಿತ್ರಗಳು ಈ ವರ್ಷ ಕನ್ನಡದಲ್ಲಿ ನಿರ್ಮಾಣವಾಗಿದ್ದು. ಹೊಸ ಹೊಸ ನಿರ್ಮಾಪಕರು ನಿರ್ದೇಶಕರು ನಟ ನಟಿಯರು ಚಿತ್ರರಂಗಕ್ಕೆ ತಂಡೋಪತಂಡವಾಗಿ ಹರಿದು ಬರ್ತಿದ್ದಾರೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಟ ದತ್ತಣ್ಣ ಹೇಳಿದ್ದಾರೆ.
ಮನಸ್ಸಿನಾಟ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ನಂಬಿಕೆ ದ್ರೋಹ ಹೆಚ್ಚಾಗಿದೆ ಎಂಬ ಮಾತುಗಳು ತುಂಬಾ ದಿನಗಳಿಂದ ಕೇಳಿಬರುತ್ತಿದ್ದವು. ಇನ್ನು ಈ ಅನುಭವ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಟ ದತ್ತಣ್ಣ ಅವರಿಗೂ ಆಗಿದ್ದು. ಈ ವಿಷಯವನ್ನು ಸ್ವತಃ ದತ್ತಣ್ಣ ಅವರೇ ಬಹಳ ಬೇಸರದಿಂದಲೇ ಹೇಳಿಕೊಂಡರು.
ಮನಸ್ಸಿನಾಟ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ದತ್ತಣ್ಣ ಮಾತು ಕನ್ನಡ ಚಿತ್ರರಂಗದಲ್ಲಿ ಅದ್ಭುತವಾದ ನಿರ್ಮಾಪಕರಿದ್ದಾರೆ. ಆದರೆ, ಅದ್ಭುತವಾದ ವಾತಾವರಣವನ್ನು ಕೆಡಿಸುವಂತಹ ಕೆಲವು ನಿರ್ಮಾಪಕರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ಇಂತವರಿಂದ ಕನ್ನಡ ಚಿತ್ರರಂಗ ಹಾಳಾಗಬಾರದು. ಅಲ್ಲದೆ ನಮ್ಮ ಕನ್ನಡ ಚಿತ್ರರಂಗಕ್ಕೆ ಇರುವಂತಹ ಮರ್ಯಾದೆಯೂ ಹೋಗಬಾರದು. ಬೇರೆ ಇಂಡಸ್ಟ್ರಿ ನಮ್ಮನ್ನು ಕೆಟ್ಟದಾಗಿ ನೋಡಬಾರದು ಎಂಬ ದೃಷ್ಟಿಯಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ನಾನು ಈ ಸಭೆಯಲ್ಲಿ ಅವರ ಹೆಸರನ್ನು ಹೇಳಲು ಬಯಸುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ. ಅವರು ನಮ್ಮನ್ನು ಹೇಗೆ ಯಾಮಾರಿಸ್ತಾರೆ ಅಂದ್ರೆ ಅದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅವರು ನಮ್ಮನ್ನು ಯಾಮಾರಿಸಲು ಬಳಸುವ ಬುದ್ಧಿಯನ್ನು ಸಿನಿಮಾವನ್ನು ಶ್ರೀಮಂತಗೊಳಿಸುವ ವಿಚಾರಕ್ಕೆ ಬಳಸಿದ್ದರೆ, ನಿಜವಾಗ್ಲೂ ಉತ್ತಮ ನಿರ್ಮಾಪಕರಾಗ್ತಿದ್ರು. ಅಲ್ಲದೆ, ಅವರಿಂದ ಉತ್ತಮ ಚಿತ್ರಗಳು ಸಹ ಬರುತ್ತಿದ್ದವು. ಆದ್ರೆ ಸಿನಿಮಾವನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡರೆ ತುಂಬಾ ತೊಂದರೆಯಾಗುತ್ತದೆ ಎಂದು ದತ್ತಣ್ಣ ಹೇಳಿದರು.
ಅಷ್ಟಕ್ಕೂ ಈ ವಿಚಾರವನ್ನು ದತ್ತಣ್ಣ ಪ್ರಸ್ತಾಪಿಸಿದ್ದರ ಹಿಂದೆ ಕೆಲವು ಘಟನೆಗಳಿವೆ. ಇತ್ತೀಚೆಗೆ ದತ್ತಣ್ಣ ನಟಿಸಿದ ಕೆಲವು ಚಿತ್ರದ ನಿರ್ಮಾಪಕರು ದತ್ತಣ್ಣ ಅವರಿಗೆ ಮಾತನಾಡಿದ ಸಂಭಾವನೆಯನ್ನು ಕೊಡದೇ ಮೋಸ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ದತ್ತಣ್ಣ ಅವರೇ ಕೆಲವು ನಿರ್ಮಾಪಕರು ಸಂಭಾವನೆಯನ್ನು ಕೊಡದೇ ಯಾಮಾರಿಸಿ ದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.