ಖ್ಯಾತ ಬಾಲಿವುಡ್ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗ ಸಾಲು ಸಾಲಾಗಿ ಅನೇಕ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದ್ದು ಇಂದು ಸರೋಜ್ ಖಾನ್ ನಿಧನರಾಗಿರುವುದು ಎಲ್ಲರಿಗೂ ಆಘಾತ ಉಂಟುಮಾಡಿದೆ.
ಬಹಳ ಸರಳ ಸ್ವಭಾವದ ನೃತ್ಯ ನಿರ್ದೇಶಕಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸರೋಜ್ ಖಾನ್, ಮುಂಬೈ ಬಾಂದ್ರಾದ ಗುರು ನಾನಕ್ ಆಸ್ಪತ್ರೆಯಲ್ಲಿ ಜೂನ್ 20 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸರೋಜ್ ಖಾನ್ ಕಳೆದ 40 ವರ್ಷಗಳಲ್ಲಿ ಸುಮಾರು 2000 ಹಾಡುಗಳಿಗೆ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದ 'ಖಳ್ ನಾಯಕ್' ಚಿತ್ರದ ಹಾಡೊಂದು ಚಿತ್ರರಂದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಅಷ್ಟೇ ಅಲ್ಲ, 'ತೇಜಾಬ್' ಚಿತ್ರದ ಏಕ್ ದೋ ತೀನ್ ಹಾಡಿಗೆ ಕೂಡಾ ನೃತ್ಯ ನಿರ್ದೇಶನ ಮಾಡಿದ್ದು ಇದೇ ಸರೋಜ್ ಖಾನ್. ಈ ಹಾಡು ಮಾಧುರಿ ದೀಕ್ಷಿತ್ ಅವರಿಗೆ ಲಕ್ಷಾಂತರ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿತ್ತು.
ಇವರ 'ತೇಜಾಬ್' ಹಾಡು ಎಷ್ಟು ಫೇಮಸ್ ಆಗಿತ್ತೆಂದರೆ ಈ ಚಿತ್ರ ಬಿಡುಗಡೆಯಾದಾಗ ಮುಂಬೈ ಥಿಯೇಟರ್ನಲ್ಲಿ ಇಬ್ಬರು ಬ್ಲಾಕ್ನಲ್ಲಿ ಟಿಕೆಟ್ ಪಡೆದಿದ್ದಾರೆ. ಆದರೆ ಆಗಲೇ ಸಿನಿಮಾ ಆರಂಭವಾಗಿದೆ. ಸ್ಥಳದಲ್ಲೇ ಇದ್ದ ಸರೂಜ್ ಖಾನ್ ಅವರನ್ನು ಉದ್ದೇಶಿಸಿ ಆ ಇಬ್ಬರೂ ಸಿನಿಮಾ ಶುರು ಆಗಿದೆಯಾ, ಒಂದು ವೇಳೆ ಏಕ್ ದೋ ತೀನ್ ಹಾಡು ಮುಗಿದಿದ್ದರೆ ನಾವು ಸಿನಿಮಾ ನೋಡುವುದು ಪ್ರಯೋಜನವಿಲ್ಲ ಎಂದು ಹೇಳಿದ್ದರಂತೆ.
ವಿಶೇಷ ಎಂದರೆ ಸರೋಜ್ ಖಾನ್ ಕನ್ನಡ ಸಿನಿಮಾಗಳಿಗೂ ನೃತ್ಯ ನಿರ್ದೇಶನ ಮಾಡಿದ್ದಾರೆ. 2009 ರಲ್ಲಿ ಕೆ. ನರೇಂದ್ರ ಬಾಬು ನಿರ್ದೇಶನದಲ್ಲಿ ಕಾರ್ತಿಕ್ ಶೆಟ್ಟಿ ಹಾಗೂ ಮಧು ಶರ್ಮಾ ನಟಿಸಿದ್ದ 'ಯುವ' ಚಿತ್ರದ ಮೂಲಕ ಸರೋಜ್ ಖಾನ್ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ನಂತರ 2018 ರಲ್ಲಿ ನಿರ್ಮಾಪಕ ಮುರಳಿ ಕೃಷ್ಣ ಕನ್ನಡದ 'ಗರ' ಚಿತ್ರದ ನೃತ್ಯ ನಿರ್ದೇಶನಕ್ಕಾಗಿ ಸರೋಜ್ ಖಾನ್ ಅವರನ್ನು ಕರೆ ತಂದಿದ್ದರು.
'ಗರ' ಚಿತ್ರೀಕರಣದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸರೋಜ್ ಖಾನ್ 'ನಾನು ನಿರ್ಮಾಪಕರ ಬಳಿ ಹೆಚ್ಚು ಹಣ ಖರ್ಚು ಮಾಡಿಸುವ ಮಹಿಳೆ ಅಲ್ಲ. ನಾನು ಮಾಂಸಾಹಾರ ಸೇವಿಸುವುದಿಲ್ಲ. ವಿಮಾನ ಪ್ರಯಾಣ ಕೂಡಾ ಕೇಳುವುದಿಲ್ಲ. ಎಸಿ ರೈಲಿನಲ್ಲಿ ಬರುತ್ತೇನೆ ಎಂದು ಹೇಳಿದ್ದರು'. ಈ ಚಿತ್ರದ ಹಾಡಿಗೆ ಸ್ಟುಡಿಯೋ ಹಾಗೂ ಮೇಲುಕೋಟೆಯಲ್ಲಿ ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಜಾನಿ ಲಿವರ್ ಕೂಡಾ ನಟಿಸಿದ್ದಾರೆ.
ಕನ್ನಡದ ಯುವ ಹಾಗೂ ಗರ ಚಿತ್ರಕ್ಕೆ ನೃತ್ಯ ನಿರ್ದೇಶನ
ಬಾಲಿವುಡ್ ನಟ-ನಟಿಯರ ಬಗ್ಗೆ ಮಾತನಾಡಿದ್ದ ಸರೋಜ್ ಖಾನ್, ಮಾಧುರಿ ದೀಕ್ಷಿತ್ ಬೆಸ್ಟ್ ಡ್ಯಾನ್ಸರ್ ಆದರೆ ನನಗೆ ಶ್ರೀದೇವಿ ಎಂದರೆ ಬಹಳ ಇಷ್ಟ. ಒಮ್ಮೆ ಶ್ರೀದೇವಿ 11,000 ರೂಪಾಯಿ ಹಣವನ್ನು ಒಂದು ಕವರ್ನಲ್ಲಿಟ್ಟು ಇದನ್ನು ನಿಮ್ಮ ಮಕ್ಕಳಿಗೆ ಕೊಡಿ ಎಂದು ಹೇಳಿದ್ದರಂತೆ. ಅಷ್ಟೇ ಅಲ್ಲ, ಗೋವಿಂದ ಚಿತ್ರರಂಗಕ್ಕೆ ಬಂದಾಗ ಅವರಿಗೆ 100 ರೂಪಾಯಿ ಹಣ ನೀಡಿ ಡ್ಯಾನ್ಸ್ ಕಲಿಯುವಷ್ಟು ಶಕ್ತಿ ಇರಲಿಲ್ಲ. ನಾನು ಉಚಿತವಾಗಿ ಅವರಿಗೆ ಡ್ಯಾನ್ಸ್ ಹೇಳಿಕೊಟ್ಟೆ. ಗೋವಿಂದ ನಾಯಕನಾಗಿ ಹಣ, ಹೆಸರು ಮಾಡಿದಾಗ 24,000 ರೂಪಾಯಿ ಗುರುದಕ್ಷಿಣೆ ನೀಡಿದ್ದರು. ನನ್ನ ಆರೋಗ್ಯ ಸರಿ ಇಲ್ಲದಿದ್ದಾಗ ಒಂದು ಬಾಕ್ಸ್ನಲ್ಲಿ 4 ಲಕ್ಷ ರೂಪಾಯಿ ಕಳಿಸಿಕೊಟ್ಟು 'ನಾನು ನಿಮಗಾಗಿ ಇದ್ದೇನೆ' ಎಂದು ಬರೆದುಕಳಿಸಿದ್ದರು ಎಂದು ಸರೋಜ್ ಖಾನ್ ತಮಗೆ ಸಹಾಯ ಮಾಡಿದವರನ್ನು ಆಗ್ಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು.
ಒಟ್ಟಿನಲ್ಲಿ ಒಬ್ಬ ಪ್ರತಿಭಾನ್ವಿತ ನೃತ್ಯ ನಿರ್ದೇಶಕಿಯನ್ನು ಕಳೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ಉಂಟಾದ ಬಹಳ ದೊಡ್ಡ ನಷ್ಟ.