ಬೆಂಗಳೂರು:ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಎಂಇಎಸ್ ಪುಂಡರ ವಿರುದ್ಧ ಚಂದನವನ ಕಿಡಿ ಕಾರಿದೆ.
ನಟ ಶಿವರಾಜ್ಕುಮಾರ್, ಜಗ್ಗೇಶ್, ದರ್ಶನ್, ಗಣೇಶ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ವಿನೋದ್ ಪ್ರಭಾಕರ್, ದ್ರುವ ಸರ್ಜಾ ಹಾಗೂ ನಟಿ ಮೇಘನಾ ಗಾವ್ಕಂರ್ ಸೇರಿದಂತೆ ಹಲವರು ಟ್ವೀಟ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ ಎಂದು ಟ್ವೀಟ್ ಮಾಡಿದ್ದಾರೆ. ಇವರ ಜೊತೆ ಇಡೀ ಸ್ಯಾಂಡಲ್ವುಡ್ನ ನಟ ಮತ್ತು ನಟಿಯರು ಕೈಜೋಡಿಸಿದ್ದಾರೆ.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಟ ದರ್ಶನ್ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ. ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ. ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು ಎಂದು ನಟ ದ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ಆನಂದ್ ರಾಮ್ ಕೂಡ ಟ್ವೀಟ್ ಮಾಡಿ ಎಂಇಎಸ್ ಪುಂಡರ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಭಾಷೆ, ನಾಡು, ನೀರಿನ ಪರ ಧ್ವನಿಯಾಗಿರುವುದು ನಮ್ಮ ಕರ್ತವ್ಯ. ಬೆಳಗಾವಿ ಕರ್ನಾಟಕದ ಕಳಶ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕನ್ನಡ ಭಾವುಟವನ್ನು ಸುಟ್ಟು ಹಾಕಿದ್ದು ಸ್ಯಾಂಡಲ್ವುಡ್ ನಟರಷ್ಟೇ ಅಲ್ಲದೇ ರಾಜಕೀಯ ನಾಯಕರು ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ.