ಬೆಂಗಳೂರು:ಸಿನಿಮೀಯ ರೀತಿಯಲ್ಲಿ ವಕೀಲನನ್ನು ಅಪಹರಿಸಿದ್ದ ಸ್ಯಾಂಡಲ್ವುಡ್ ಖಳನಟರು ಸೇರಿದಂತೆ 9 ಮಂದಿ ಅಪಹರಣಕಾರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ವಕೀಲ ಅಭಯ್ ರವೀಂದ್ರ ಕುಲಕರ್ಣಿ ಎಂಬುವರನ್ನು ಅಪಹರಿಸಿದ ಆರೋಪದ ಮೇರೆಗೆ ಪ್ರಮುಖ ಆರೋಪಿ ಸಿದ್ದೇಶ್, ಸಂಜಯ್, ಅರುಣ್, ಅಶೋಕ್, ರವಿ ಸೇರಿದಂತೆ 9 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಕೀಲ ಅಭಯ್ ನಾಗರಭಾವಿ ನಿವಾಸಿಯಾಗಿದ್ದು, ಇವರಿಗೆ ಪರಿಚಿತನಾಗಿದ್ದ ಸಿದ್ದೇಶ್ ಹಣಕಾಸಿನ ವ್ಯವಹಾರ ಹೊಂದಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕಾನೂನು ಸಮಾಲೋಚಕನಾಗಿದ್ದ ಅಭಯ್ಗೆ ಕಂಪನಿಯೊಂದರಲ್ಲಿ ಹೂಡಿಕೆ ವಿಚಾರವಾಗಿ ಸಿದ್ದೇಶ್ ಹಣ ನೀಡಿದ್ದ ಎನ್ನಲಾಗಿದೆ.
ಇದೇ ವಿಚಾರಕ್ಕಾಗಿ ಹಣಕಾಸಿನ ವೈಷ್ಯಮದ ಹಿನ್ನೆಲೆ ಸೆ.20 ರಂದು ಮಾತುಕತೆಗೆ ಎಂದು ಕರೆಯಿಸಿ ನಾಗರಭಾವಿಯ ಸ್ವಾತಿ ಹೋಟೆಲ್ ಬಳಿ ವಕೀಲನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ವಕೀಲನ ಸಹೋದರನಿಗೆ ಕರೆ ಮಾಡಿ 10 ಲಕ್ಷ ರೂ. ತರುವಂತೆ ಧಮಕಿ ಹಾಕಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ವಾಟ್ಸ್ಆ್ಯಪ್ ನಂಬರ್ಗೆ ಲೊಕೇಷನ್ ಕಳುಹಿಸಿ ಹಣ ತರುವಂತೆ ಒತ್ತಾಯಿಸಿದ್ದಾರೆ. ಬಳಿಕ ಘಟನೆ ಕುರಿತಂತೆ ಸಹೋದರ ಪೊಲೀಸರಿಗೆ ದೂರು ನೀಡದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರರ ಹಿಂದೆ ಬಿದ್ದಿದ್ದಾರೆ.
ಲೊಕೇಷನ್ ಆಧರಿಸಿ ಆರೋಪಿಗಳ ಬಂಧನ
ಆರೋಪಿಗಳು ಕರೆ ಮಾಡಿದ ಮಾಹಿತಿ ಆಧರಿಸಿ ಶೋಧ ನಡೆಸಿದ್ದಾಗ ಆಂಧ್ರಹಳ್ಳಿ ಬಳಿಯ ಕಚೇರಿಯಲ್ಲಿ ಅಪಹರಣಕಾರರು ಇರುವುದು ಗೊತ್ತಾಗಿತ್ತು. ಮಿಂಚಿನಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಸಂಜಯ್ ಹಾಗೂ ಕೆಲ ಆರೋಪಿಗಳು ‘ಭರ್ಜರಿ’ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಸ್ಟಂಟ್ ಆ್ಯಕ್ಟರ್ ಆಗಿ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.