ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 6 ಸಾವಿರ ದಾಟಿದ್ದು ಲಾಕ್ಡೌನ್ ಸಡಿಲಿಕೆ ಆದರೂ ಕೂಡಾ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಆದಷ್ಟು ಬೇಗ ಕೊರೊನಾ ನಾಶವಾಗಲಿ ಅಥವಾ ಸೂಕ್ತ ಲಸಿಕೆ ಕಂಡುಹಿಡಿಯುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಬೆಂಗಳೂರು ಸಲೂನ್ ಉದ್ಯಮಕ್ಕೆ ನಟಿಯರ ಬೆಂಬಲ ದೇವಸ್ಥಾನ, ಮಾಲ್, ಸಲೂನ್ಗೆ ಹೋಗಲು ಕೂಡಾ ಜನರು ಹಿಂಜರಿಯುತ್ತಿದ್ದಾರೆ. ಬಹಳಷ್ಟು ಜನರು ಮನೆಯಲ್ಲೇ ತಮ್ಮ ಕುಟುಂಬದ ಸದಸ್ಯರ ಸಹಾಯ ಪಡೆದು ಹೇರ್ ಕಟಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸಲೂನ್ ಉದ್ಯಮ ಜನರಿಗೆ ಧೈರ್ಯ ಹೇಳಲು ಪ್ರಯತ್ನಿಸುತ್ತಿದೆ. ಯಾವುದೇ ಭಯ ಇಲ್ಲದೆ ನೀವು ಸಲೂನ್ಗೆ ಬರಬಹುದು ಎನ್ನುತ್ತಿದೆ. ಬೆಂಗಳೂರು ಸಲೂನ್ ಉದ್ಯಮಕ್ಕೆ ಸಿನಿಮಾ ನಟಿಯರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುಮಾರು ಎರಡೂವರೆ ತಿಂಗಳ ಬಳಿಕ ಮನೆಯಿಂದ ಹೊರ ಬಂದಿರುವ 'ಅಕ್ಕ' ಧಾರಾವಾಹಿ, ಬಿಗ್ಬಾಸ್ ಖ್ಯಾತಿಯ ಅನುಪಮಾ ಗೌಡ, ಬೆಂಗಳೂರಿನ ಸಲೂನ್ವೊಂದಕ್ಕೆ ತೆರಳಿ ಹೇರ್ಕಟ್, ಹೇರ್ವಾಶ್ ಮಾಡಿಸಿಕೊಂಡು ಬಂದಿದ್ದಾರೆ. ಇನ್ನು ಲಾಕ್ಡೌನ್ ವೇಳೆ ಕೂಡಾ ಮನೆಯಿಂದ ಹೊರಬಂದು ಸಮಾಜ ಸೇವೆಯಲ್ಲಿ ಬ್ಯುಸಿ ಇದ್ದ ನಟಿ ರಾಗಿಣಿ ಕೂಡಾ ಈಗ ಸಲೂನ್ಗೆ ತೆರಳಿ ಹೇರ್ ಟ್ರಿಮ್ , ವಾಶ್ ಮಾಡಿಸಿಕೊಂಡು ಬಂದಿದ್ದಾರೆ. ಇವರೊಂದಿಗೆ ನಿರೂಪಕಿ ಅನುಶ್ರೀ ಕೂಡಾ ಸಲೂನ್ಗೆ ಹೋಗಿ ಬಂದಿದ್ದಾರೆ.
ಕಳೆದ ಎರಡೂವರೆ ತಿಂಗಳಿಂದ ಸಲೂನ್ ಮುಚ್ಚಿರುವುದರಿಂದ ಸಲೂನ್ ಉದ್ಯಮ ಕೂಡಾ ಬಹಳ ನಷ್ಟಕ್ಕೆ ಒಳಗಾಗಿದೆ. ಆದರೆ ಈಗ ಜನರನ್ನು ಸಲೂನ್ಗೆ ಬರುವಂತೆ ಮಾಡಲು ಸ್ಚಚ್ಛತೆಗೆ ಅವರು ಬಹಳ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸರ್ಕಾರ ಸೂಚಿಸಿರುವ ಪ್ರತಿಯೊಂದೂ ಮಾರ್ಗಸೂಚಿಗಳನ್ನು ಸಲೂನ್ನವರು ಅನುಸರಿಸುತ್ತಿದ್ದಾರೆ.
ಬೆಂಗಳೂರಿನ ಸಲೂನ್ವೊಂದಕ್ಕೆ ಹೋಗಿಬಂದ ಈ ನಟಿಯರು, ಸಲೂನ್ನವರ ಸೇವೆಗೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಇಲ್ಲಿ ಎಂಟ್ರಿ ಆಗುತ್ತಿದ್ದಂತೆ ಸೆಲಬ್ರಿಟಿಗಳು, ಸಾಮಾನ್ಯ ವ್ಯಕ್ತಿಗಳು ಎಂದು ನೋಡದೆ ಪ್ರತಿಯೊಬ್ಬರಿಗೂ ಟೆಂಪ್ರೇಚರ್ ಚಕ್ ಮಾಡಲಾಗುತ್ತದೆ. ನಂತರ ಸ್ಯಾನಿಟೈಜರ್ ನೀಡಿ ಮಾಸ್ಕ್ , ಸಾಕ್ಸ್, ಕೇಪ್ ನೀಡಲಾಗುತ್ತದೆ. ಒಳಹೋದ ನಂತರ ನೀವು ಕೂರಬೇಕಾದ ಚೇರ್ ಮೇಲೆ ಕೂಡಾ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛ ಮಾಡಲಾಗುತ್ತದೆ. ಸಲೂನ್ನಲ್ಲಿ ಕೆಲಸ ಮಾಡುವವರು ಕೂಡಾ ಸಾಕ್ಸ್ , ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇನ್ನು ಇಲ್ಲಿ ಬಳಸುವ ವಸ್ತುಗಳನ್ನು ಕೂಡಾ ಬಿಸಿನೀರಿನಲ್ಲಿ ಸ್ಯಾನಿಟೈಸ್ ಮಾಡಲಾಗುವುದು.
ಒಟ್ಟಿನಲ್ಲಿ ಜನರು ಭಯ ಪಡದೆ ಈಗ ಸಲೂಗೆ ತೆರಳಬಹುದು ಎಂದು ರಾಗಿಣಿ ದ್ವಿವೇದಿ, ಅನುಪಮಾ ಗೌಡ ಹಾಗೂ ಅನುಶ್ರೀ ಹೇಳಿದ್ದಾರೆ.