ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಲ್ಲದೇ ಹಲವು ಸಂಘಟನೆಗಳು, ಸಿನಿಮಾ ತಾರೆಯರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗ ಅಲ್ಲದೇ ತೆಲುಗು, ತಮಿಳು ಹಾಗು ಹಿಂದಿಯಲ್ಲಿ ಮಿಂಚುತ್ತಿರುವ ನಟಿ ಪ್ರಣಿತಾ ಸುಭಾಷ್ ಕೂಡ ಈ ಘಟನೆಯನ್ನು ವಿರೋಧಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಂದನವನದ ಬೆಡಗಿ, "ಈ ಭಯಾನಕ ಘಟನೆಯ ಬಗ್ಗೆ ತನ್ನ ವಿರೋಧವನ್ನು ವ್ಯಕ್ತಪಡಿಸಿದ್ದು. ನಾವು ಮಹಿಳೆಯರನ್ನು ದೇವತೆಯಾಗಿ ಪೂಜಿಸುವ ದೇಶಕ್ಕೆ ಸೇರಿದವರು. ರಾಕ್ಷಸರನ್ನು ಕೊಂದ ಚಾಮುಂಡಿ ದೇವಿಯ ತಾಯ್ನಾಡಿನಲ್ಲಿ ಇಂತಹ ಭಯಾನಕ ಘಟನೆ ನಡೆದಿರುವುದು ಹೃದಯ ವಿದ್ರಾವಕವಾಗಿದೆ. ಶ್ರೀಮಂತ ಸಂಸ್ಕೃತಿಗೆ ಹೆಸರಾದ ಮೈಸೂರು ನಗರದಲ್ಲಿ ಇಂತಹ ಘಟನೆ ನಡೆದಿದೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಹಿಳೆಯರ ಮೇಲಿನ ಶೋಷಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು" ಎಂದು ಆಗ್ರಹಿಸಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ನಟಿ ಪ್ರಣಿತಾ ಸುಭಾಷ್ ಒತ್ತಾಯಿಸಿದ್ದಾರೆ.