ಆತ್ಮೀಯ ಗೆಳೆಯನಂತಿದ್ದ ಪ್ರೀತಿಯ ಶ್ವಾನವನ್ನು ಕಳೆದುಕೊಂಡಿರುವ ಮೇಘನಾ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಬ್ರುನೋ ಎಂಬ ಹೆಸರಿನ ಶ್ವಾನವನ್ನು ಅವರು ಬಹಳ ಪ್ರೀತಿಯಿಂದ ಸಾಕಿದ್ದರು. ಇದೀಗ ಅದು ಕೊನೆಯುಸಿರೆಳೆದಿದೆ. ಇವನನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ನನ್ನ ಬೆಸ್ಟ್ ಫ್ರೆಂಡ್ ಬ್ರುನೋ ಇಂದು ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ನೋವು ತೋಡಿಕೊಂಡಿದ್ದಾರೆ.
ಬೆಸ್ಟ್ ಫ್ರೆಂಡ್ ಕಳೆದುಕೊಂಡು ನಟಿ ಮೇಘನಾ ರಾಜ್ ಭಾವುಕ - ನಟಿ ಮೇಘನಾ ರಾಜ್,
ಕಳೆದ ವರ್ಷ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡಿದ್ದ ಮೇಘನಾ ರಾಜ್ ಮನೆಯಲ್ಲಿ ಮತ್ತೆ ದುಃಖ ಆವರಿಸಿದೆ.
ಇವನ ಜೊತೆ ಜ್ಯೂ. ಚಿರು ಆಡವಾಡಬೇಕು. ಇವನ ಬೆನ್ನ ಮೇಲೆ ಕುಳಿತು ಅವನು ಸವಾರಿ ಮಾಡಬೇಕು ಅಂದ್ಕೊಂಡಿದ್ದೆ. ಬ್ರುನೋಗೆ ಮಕ್ಕಳನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ಹೇಗೋ ಜ್ಯೂನಿಯರ್ ಚಿರು ಜೊತೆ ಮೃದುವಾಗಿ ನಡೆದುಕೊಳ್ಳುತ್ತಿದ್ದಂತೆ. ಅವನಿಗೆ ತನ್ನ ಯಜಮಾನನ ಬಗ್ಗೆ ಗೊತ್ತಿತ್ತು ಅನಿಸುತ್ತದೆ ಎಂದು ಮೇಘನಾ ಬರೆದುಕೊಂಡಿದ್ದಾರೆ.
ನೀನಿಲ್ಲದ ಈ ಮನೆ ಮೊದಲಿನಂತಿರಲ್ಲ. ಮನೆಗೆ ಬರುತ್ತಿದ್ದ ಪ್ರತಿಯೊಬ್ಬರೂ ಬ್ರುನೋ ಎಲ್ಲಿ ಎಂದು ಕೇಳುತ್ತಿದ್ದರು. ನಾವು ನಿನ್ನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀನೀಗ ಚಿರು ಜೊತೆ ಇದ್ದೀಯಾ ಮತ್ತು ಅವರ ಜೊತೆ ನೀನು ಯಾವಾಗಲೂ ಕೀಟಲೆ ಮಾಡುತ್ತಿರುತ್ತಿಯಾ ಎಂದು ನಂಬಿದ್ದೇನೆ ಎಂದು ಮೇಘನಾ ರಾಜ್ ಭಾವುಕವಾಗಿ ಬರೆದುಕೊಂಡಿದ್ದಾರೆ.