ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಛಾಪು ಮೂಡಿಸಿದ್ದ ಹಿರಿಯ ಪೋಷಕ ನಟ ಶನಿ ಮಹಾದೇವಪ್ಪ ಅವರು ಅನಾರೋಗ್ಯದ ಹಿನ್ನೆಲೆ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಕನ್ನಡ ನಟರಾದ ಪುನೀತ್, ಸುದೀಪ್, ಜಗ್ಗೇಶ್ ಸೇರಿದಂತೆ ಮುಂತಾದವರು ಸಂತಾಪ ಸೂಚಿಸಿದ್ದಾರೆ.
ಶನಿ ಮಹಾದೇವಪ್ಪನವರ ನಿಧನಕ್ಕೆ ಸ್ಯಾಂಡಲ್‌ವುಡ್ ಮಂದಿ ಕಂಬನಿ ಮಿಡಿದಿದ್ದು, ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. 'ಅಪ್ಪಾಜಿಯವರ ಜೊತೆ 'ಭಕ್ತ ಕುಂಬಾರ', 'ಶ್ರೀನಿವಾಸ ಕಲ್ಯಾಣ', 'ಕವಿರತ್ನ ಕಾಳಿದಾಸ', 'ಮೂರೂವರೆ ವಜ್ರಗಳು' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ ಹಿರಿಯ ನಟರಾದ ಶನಿ ಮಹದೇವಪ್ಪನವರು ನಮ್ಮನ್ನು ಅಗಲಿದ್ದಾರೆ. ಇದು ನನಗೆ ನೋವುಂಟು ಮಾಡಿದೆ ಎಂದು ಪುನೀತ್ ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಟ್ವೀಟ್ ನಟ ಜಗ್ಗೇಶ್ ಕೂಡ ಸಂತಾಪ ಸೂಚಿಸಿದ್ದು, ನಾನು ಶನಿ ಮಹಾದೇವಪ್ಪ ಅವರನ್ನು ಮಾವ ಅಂತಾ ಕರೆಯುತ್ತಿದ್ದೆ. ಸಕ್ಕರೆ ಕಾಯಿಲೆಯಿಂದ ಎರಡು ಕಣ್ಣುಗಳನ್ನು ಕಳೆದುಕೊಂಡ ಶನಿ ಮಹಾದೇವಪ್ಪ ಅವರಿಗೆ 10 ವರ್ಷದ ಹಿಂದೆ ಮೇಯರ್ ಫಂಡ್ ನಿಂದ 5 ಲಕ್ಷ ರೂಪಾಯಿ ಕೊಡಿಸಲು ಸಹಾಯ ಮಾಡಿದ್ದೆ ಅಂತಾ ಮಹಾದೇವಪ್ಪನವರ ಜೊತೆಗಿನ ಒಡನಾಟವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಪತಿ ಅಂಬರೀಶ್ ಜೊತೆಗೆ ಇರುವ ಫೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ. ನಮ್ಮನ್ನೆಲ್ಲ ಅಗಲಿದ ಹಿರಿಯ ಕಲಾವಿದರಾದ ಶನಿ ಮಹಾದೇವಪ್ಪನವರ (90 ವರ್ಷ) ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವೆ. ಸರಿ ಸುಮಾರು 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿರುವ ಅವರ ಕಲಾ ಸೇವೆ ಚಿರಸ್ಥಾಯಿ. ಅವರ ಕುಟುಂಬ ಹಾಗೂ ಪ್ರೀತಿಪಾತ್ರರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸುಮಲತಾ ಅಂಬರೀಶ್ ಸಂತಾಪ ಸೂಚಿಸಿದ್ದಾರೆ.
ಕಿಚ್ಚ ಸುದೀಪ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಶನಿ ಮಹಾದೇವಪ್ಪ ಅವರ ಫೋಟೋ ಹಾಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗದ ಸಾಕಷ್ಟು ನಟರು ಹಾಗೂ ಪೋಷಕ ಕಲಾವಿದರು ಶನಿ ಮಹಾದೇವಪ್ಪ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.