ಕರ್ನಾಟಕ

karnataka

ETV Bharat / sitara

'ಹುಚ್ಚ'ನಿಂದ 'ಕಿಚ್ಚ'ನಿಗೆ ಸ್ಟಾರ್‌ಪಟ್ಟ ತಂದುಕೊಟ್ಟ 'ಸ್ಪರ್ಶ'ದಿಂದ 'ವಿಕ್ರಾಂತ್ ರೋಣ'ವರೆಗೆ 'ಮಾಣಿಕ್ಯ'ನ ಸಿನಿ ಪಯಣ

ಕಿಚ್ಚ ಸುದೀಪ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸದ್ಯ 49ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಸುದೀಪ್​​ ಈ ನಿರ್ಧಾರ ಮಾಡಿದ್ದಾರೆ. ನಟ, ಖಳನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ನಿರೂಪಕನಾಗಿ ಮಿಂಚಿರುವ ಕಿಚ್ಚನ ಸಿನಿಮಾ ಕೆರಿಯರ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿರುವ ಸಿನಿಮಾಗಳ ಕಹಾನಿ ಇದು.

sudeep
sudeep

By

Published : Sep 2, 2021, 6:01 AM IST

ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಸಿನಿಮಾ ರಂಗದಲ್ಲೇ ಸ್ಟಾರ್‌ಡಮ್ ಹೊಂದಿರುವ ಮಲ್ಟಿ ಟ್ಯಾಲೆಂಟೆಡ್ ನಟ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಷಾ, ಹೆಬ್ಬುಲಿ, ಪೈಲ್ವಾನ್.. ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಸುದೀಪ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಸೆಪ್ಟೆಂಬರ್ 2, 1973ರಲ್ಲಿ ಸಂಜೀವ್ ಮಂಜಪ್ಪ ಹಾಗೂ ಸರೋಜ ದಂಪತಿ ಪುತ್ರನಾಗಿ ಸುದೀಪ್ ಶಿವಮೊಗ್ಗದಲ್ಲಿ ಜನಿಸಿದರು. ಸದ್ಯ 49ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಸುದೀಪ್​​ ಈ ನಿರ್ಧಾರ ಮಾಡಿದ್ದಾರೆ.

ಕನ್ನಡ ಚಿತ್ರರಂಗವಲ್ಲದೇ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ದೇಶಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಕಿಚ್ಚ, ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನೂ ಕಂಡಿದ್ದಾರೆ. ಕಷ್ಟದ ದಿನಗಳನ್ನು ಮೆಟ್ಟಿ ಸ್ಯಾಂಡಲ್​​ವುಡ್​ ಬಾದ್ ​ಷಾ ಎನಿಸಿಕೊಂಡಿದ್ದಾರೆ. ಸುದೀಪ್ ಸಿನಿಮಾ ಕೆರಿಯರ್​​ನಲ್ಲಿ ಕೆಲವೊಂದು ಸಿನಿಮಾಗಳು ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿವೆ.

ಕಿಚ್ಚನಿಗೆ ಸ್ಟಾರ್ ಪಟ್ಟ ತಂದುಕೊಟ್ಟ 'ಸ್ಪರ್ಶ':

ಸುದೀಪ್ ಬಣ್ಣ ಹಚ್ಚಿದ್ದು ಮೊದಲು ಬ್ರಹ್ಮ ಚಿತ್ರಕ್ಕಾದರೂ, ಈ ಸಿನಿಮಾ ಪೂರ್ತಿಯಾಗಲಿಲ್ಲ. ನಂತರ 1997ರಲ್ಲಿ ತಾಯವ್ವ ಚಿತ್ರದಲ್ಲಿ ನಟಿಸುತ್ತಾರೆ. ಆದರೆ ಇದು ಸುದೀಪ್​​​​ಗೆ ಹೇಳಿಕೊಳ್ಳುವಂತಹ ಹೆಸರು ನೀಡುವುದಿಲ್ಲ. ಬಳಿಕ ಪ್ರತ್ಯರ್ಥ ಚಿತ್ರ ಮಾಡ್ತಾರೆ. ಈ ಚಿತ್ರ ಕೂಡಾ ಬ್ರೇಕ್ ನೀಡದಿದ್ದಾಗ, ಸುದೀಪ್ ಚಿತ್ರರಂಗದ ಸಹವಾಸವೇ ಸಾಕು ಎಂದು ನಿರ್ಧರಿಸುತ್ತಾರೆ. ಆ ಸಮಯದಲ್ಲಿ ಅವರಿಗೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಸ್ವಲ್ಪಮಟ್ಟಿಗೆ ಹೆಸರು ನೀಡುತ್ತದೆ.

ಸುದೀಪ್ ತಂದೆ ಸಂಜೀವ್​​ ಸರೋವರ್ 1999ರಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್​​​ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದರು. ಕ್ಯೂಟ್ ಲವ್ ಸ್ಟೋರಿ ಜೊತೆ ಸುಂದರ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಸುದೀಪ್ ಮತ್ತು ರೇಖಾ ಕೆಮಿಸ್ಟ್ರಿ ವರ್ಕ್ ಔಟ್ ಆಗಿ ಈ ಸಿನಿಮಾ ಸಕ್ಸಸ್ ಕಾಣುತ್ತೆ. ಆ ಕಾಲದಲ್ಲಿ ಸ್ಪರ್ಶ ಸಿನಿಮಾ ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕಿಚ್ಚನಿಗೆ ಸ್ಟಾರ್ ಪಟ್ಟ ತಂದು ಕೊಡುತ್ತೆ.

'ಹುಚ್ಚ'ನಿಂದ 'ಕಿಚ್ಚ'ನಾದ ಸುದೀಪ್​:

ಸಿನಿಮಾ ಬಳಿಕ ಸುದೀಪ್​ಗೆ ದೊಡ್ಡಮಟ್ಟದ ಬ್ರೇಕ್ ನೀಡಿದ ಸಿನಿಮಾ ಎಂದರೆ ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ. ಈ ಚಿತ್ರ ಸುದೀಪ್​ ಅವರನ್ನು ಸ್ಟಾರ್ ಹೀರೋ ಮಾಡಿತು. 2001 ರಲ್ಲಿ ತೆರೆಕಂಡ ಈ ಸಿನಿಮಾವನ್ನು ರೆಹಮಾನ್ ಎಂಬ ನಿರ್ದೇಶಕ ಸುಮಾರು 2 ಕೋಟಿ ರೂಪಾಯಿ ಬಜೆಟ್​​ನಲ್ಲಿ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ಸುದೀಪ್ ಅದ್ಭುತ ನಟ ಎಂಬುದು ಎಲ್ಲರಿಗೂ ತಿಳಿಯಿತು. ಆ ವೇಳೆ ಸಿನಿಮಾ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತೆ.

'ಮೈ ಆಟೋಗ್ರಾಫ್' ಮೂಲಕ ನಿರ್ದೇಶಕನಾದ ಬಾದ್​ ಷಾ:

ಚಂದು, ಧಮ್, ಸ್ವಾತಿಮುತ್ತು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸುದೀಪ್ ನಟ ಮಾತ್ರವಲ್ಲ ನಿರ್ದೇಶಕನಾಗಿ ಕೂಡಾ ಗುರುತಿಸಿಕೊಂಡಿದ್ದು ಮೈ ಆಟೋಗ್ರಾಫ್ ಚಿತ್ರದ ಮೂಲಕ. ಈ ಚಿತ್ರದ ಮೂಲಕ ಆ್ಯಕ್ಟರ್, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಆಗಿ ಕೂಡಾ ಗುರುತಿಸಿಕೊಂಡರು. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುದೀಪ್ ಈ ಚಿತ್ರವನ್ನು ತಾವೇ ನಿರ್ಮಿಸಿದ್ದರು. 2006ರಲ್ಲಿ ಸುಮಾರು 2 ಕೋಟಿ ರೂಪಾಯಿ ಬಜೆಟ್​​​ನಲ್ಲಿ ತಯಾರಾದ ಮೈ ಆಟೋಗ್ರಾಫ್ ಸಿನಿಮಾ, 6 ಕೋಟಿ ರೂಪಾಯಿ ಲಾಭ ಮಾಡಿತು.

ಖಾಕಿ ತೊಟ್ಟು ಖದರ್​ ತೋರಿದ 'ವೀರ ಮದಕರಿ':

ಕಿಚ್ಚ ಖಾಕಿ ತೊಟ್ಟು ಅಬ್ಬರಿಸಿದ ಸಿನಿಮಾ ವೀರ ಮದಕರಿ. 2009ರಲ್ಲಿ ತೆರೆ ಕಂಡ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕಾಗಿ ಸುದೀಪ್ ತೂಕ ಇಳಿಸಿಕೊಂಡು ಬಹಳ ಸಣ್ಣ ಆಗಿದ್ದರು. ಕಿಚ್ಚನ ಜೊತೆ ರಾಗಿಣಿ ದ್ವಿವೇದಿ ಜೋಡಿ ವರ್ಕ್ ಔಟ್ ಆಗಿತ್ತು. 4 ಕೋಟಿಯ ಬಜೆಟ್‌ನಲ್ಲಿ ನಿರ್ಮಾಣ ಆದ ಈ ಚಿತ್ರ, ಬಾಕ್ಸ್ ಆಫೀಸ್​ ನಲ್ಲಿ ಬಾಚಿಕೊಂಡಿದ್ದು 8 ಕೋಟಿ ರೂಪಾಯಿ. ಕಾಮಣ್ಣನ ಮಕ್ಕಳು, ಫೂಂಕ್ ಹಿಂದಿ ಸಿನಿಮಾ ನಂತರ ಮತ್ತೆ ಸುದೀಪ್ ಖಾಕಿ ತೊಟ್ಟಿದ್ದು ಕೆಂಪೇಗೌಡ ಚಿತ್ರದಲ್ಲಿ. ಶಂಕರೇಗೌಡ ನಿರ್ಮಾಣದ ಈ ಚಿತ್ರದಲ್ಲಿ ಮತ್ತೆ ರಾಗಿಣಿ, ಸುದೀಪ್ ಜೊತೆ ಡ್ಯೂಯೆಟ್ ಹಾಡಿದ್ದರು. 7ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣದ ಆದ ಈ ಚಿತ್ರ, ಬಾಕ್ಸ್​ ಆಫೀಸ್​ನಲ್ಲಿ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ.

'ವಾಲಿ' ಮೂಲಕ ಖಳನಟನ ಪಾತ್ರ:

ನಾಯಕ ಮಾತ್ರವಲ್ಲ, ಸುದೀಪ್ ಖಳನಟನಾಗಿ ಕೂಡಾ ನಟಿಸಿದ ಚಿತ್ರ ವಾಲಿ. ಈ ಚಿತ್ರದ ನಂತರ ತೆಲುಗಿನ ಎಸ್​. ಎಸ್​. ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ಸುದೀಪ್ ನಾಣಿ ಎದುರು ವಿಲನ್ ಆಗಿ ನಟಿಸಿದರು. ನಾಯಕಿ ಸಮಂತಾಳನ್ನು ಕಾಡುವ, ನೊಣದಿಂದ ತೊಂದರೆಗೆ ಒಳಗಾಗುವ ಪಾತ್ರದಲ್ಲಿ ಸುದೀಪ್ ಬಹಳ ಚೆನ್ನಾಗಿ ನಟಿಸಿದ್ದರು. 40 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ 100 ಕೋಟಿ ಲಾಭ ಮಾಡಿದೆ ಎನ್ನಲಾಗಿದೆ.

ನಟನಾ ಕೌಶಲ್ಯದಿಂದಲೇ ಸ್ಟಾರ್​ ವಾಲ್ಯೂ ಹೆಚ್ಚಿಸಿಕೊಂಡ 'ಮಾಣಿಕ್ಯ':

ಒಂದೊಂದು ಚಿತ್ರಗಳ ಮೂಲಕ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ಸುದೀಪ್ 2014 ರಲ್ಲಿ ಮಾಣಿಕ್ಯ ಚಿತ್ರದಲ್ಲಿ ನಟಿಸಿದರು. ಸುದೀಪ್ ಜೊತೆಗೂಡಿ ನಿರ್ಮಾಪಕ ಎನ್.ಕುಮಾರ್ ಸುಮಾರು 18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದರು. ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದ್ದ ಮಾಣಿಕ್ಯ ಚಿತ್ರ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿತ್ತು.

ಬಾಕ್ಸ್ ಆಫೀಸ್​​​​ ಕೊಳ್ಳೆ ಹೊಡೆದ 'ರನ್ನ':

ಈ ಸಿನಿಮಾ ಯಶಸ್ಸಿನ ನಂತರ ಸುದೀಪ್ ಮತ್ತೊಂದು ಹಿಟ್ ಚಿತ್ರ ಕೊಟ್ಟಿದ್ದು ರನ್ನ. 2015ರಲ್ಲಿ ರಿಲೀಸ್ ಆದ ರನ್ನ ಚಿತ್ರವನ್ನು, ನಿರ್ಮಾಪಕರಾದ ಎಮ್​. ಚಂದ್ರಶೇಖರ್ 20 ಕೋಟಿ ಬಜೆಟ್​​​​​​​​​​​​​​​​​ನಲ್ಲಿ ನಿರ್ಮಾಣ ಮಾಡಿದ್ರು. ರನ್ನ ಬಾಕ್ಸ್ ಆಫೀಸ್​​​​ನಲ್ಲಿ ಕೊಳ್ಳೆ ಹೊಡೆದಿದ್ದು 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಕನ್ನಡ ಸಿನಿಮಾಗಳೊಂದಿಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವ ಜೊತೆಗೆ ಸುದೀಪ್ ಕೋಟಿಗೊಬ್ಬ-2 ಸಿನಿಮಾ ಮಾಡಿದ್ರು. ತಮಿಳು ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶನದ ಈ ಚಿತ್ರವನ್ನು ನಿರ್ಮಾಪಕ ಸೂರಪ್ಪ ಬಾಬು 25 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ರು. ಈ ಚಿತ್ರ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು

'ಹೆಬ್ಬುಲಿ'ಯಾಗಿ ಅಬ್ಬರಿಸಿದ 'ಪೈಲ್ವಾನ್':

ಕಿಚ್ಚ ಡಿಫರೆಂಟ್​ ಹೇರ್​​ಸ್ಟೈಲ್ ಹಾಗೂ ಆರ್ಮಿ ಗೆಟಪ್​​ನಲ್ಲಿ ಕಾಣಿಸಿಕೊಂಡ ಸಿನಿಮಾ ಹೆಬ್ಬುಲಿ. ಉಮಾಪತಿ ಈ ಚಿತ್ರವನ್ನು 30 ಕೋಟಿ ರೂಪಾಯಿ ಬಜೆಟ್​​​ನಲ್ಲಿ ನಿರ್ಮಾಣ ಮಾಡಿದರು. ಈ ಚಿತ್ರದ ನಂತರ ಸುದೀಪ್ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿದ ಸಿನಿಮಾ ಪೈಲ್ವಾನ್. ಚಿತ್ರಕ್ಕಾಗಿ ಸುದೀಪ್ ಬಾಕ್ಸಿಂಗ್, ಕುಸ್ತಿ ಕಲಿತು ನಟಿಸಿದರು. ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡಿದರೆ, ಪತ್ನಿ ಸ್ವಪ್ನ ಕೃಷ್ಣ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು. ಸಿನಿಮಾ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದು ಗಾಂಧಿನಗರದ ಸಿನಿಪಂಡಿತರ ಅಭಿಪ್ರಾಯ.

ಅಭಿಮಾನಿಗಳ ಕಾತುರ ಹೆಚ್ಚಿಸಿದ 'ವಿಕ್ರಾಂತ್ ರೋಣ':

ಸದ್ಯ ಕೋಟಿಗೊಬ್ಬ-3 ಹಾಗೂ ಬಹು ಕೋಟಿ ವೆಚ್ಚದಲ್ಲಿ ವಿಕ್ರಾಂತ್ ರೋಣ ಸಿನಿಮಾಗಳು ನಿರ್ಮಾಣ ಮಾಡಲಾಗಿದೆ. ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಬು ಹೇಳುವ ಹಾಗೇ, ಕೋಟಿಗೊಬ್ಬ-3 ಚಿತ್ರ ಒಳ್ಳೆ ಬಿಸಿನೆಸ್ ಮಾಡಿದೆ ಎನ್ನಲಾಗಿದೆ.

ಅದೇ ರೀತಿ, ವಿಕ್ರಾಂತ್ ರೋಣ ಸಿನಿಮಾಗೆ, ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಬಹುಕೋಟಿಗೆ ವ್ಯಾಪಾರ ಆಗಿದೆ ಎನ್ನಲಾಗಿದೆ. ನಟ, ಖಳನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ನಿರೂಪಕನಾಗಿ ಮಿಂಚಿರುವ ಕಿಚ್ಚನ ಸಿನಿಮಾ ಕೆರಿಯರ್‌ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಸಿನಿಮಾಗಳ ಕಹಾನಿ ಇದು.

ABOUT THE AUTHOR

...view details