ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.
ಸತ್ಯಜಿತ್ ಪುತ್ರ ಆಕಾಶ್ ಹೇಳಿರುವ ಪ್ರಕಾರ, ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ. ಮೂಲಗಳ ಪ್ರಕಾರ, ಹಲವು ದಿನಗಳಿಂದ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರ ಸಿನಿಮಾಗಳಲ್ಲಿ ಸತ್ಯಜಿತ್ ಖಳನಟ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
1986ರರಿಂದಲೂ ಕನ್ನಡ, ತೆಲುಗು ಹಾಗು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಇಲ್ಲಿಯವರೆಗೆ ಸುಮಾರು 300ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಲಿನಲ್ಲಿ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಿಂದ ಅವರಿಗೆ ಬೇಡಿಕೆ ಕಡಿಮೆ ಆಗಿದೆ. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಸತ್ಯಜಿತ್ ಅಭಿನಯಿಸಿದ್ದರು. ಈ ಸಿನಿಮಾ ಬಳಿಕ ಯಾವುದೇ ಸಿನಿಮಾಗಳಲ್ಲೂ ಅಭಿನಯಿಸಿಲ್ಲ. ಗ್ಯಾಂಗ್ರಿನ್ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಈಗ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 72 ವರ್ಷ ವಯಸ್ಸಾಗಿರುವ ಸತ್ಯಜಿತ್ ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.