ಬಹುಶಃ ಕನ್ನಡ ಚಿತ್ರ ರಂಗದಲ್ಲಿ ಮೇ 13, 1970 ಅಂದರೆ ಇಂದಿಗೆ 50 ವರ್ಷಗಳ ಹಿಂದೆ ಬಿಡುಗಡೆ ಆದ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ ಯು ಆರ್ ಅನಂತಮೂರ್ತಿ ಅವರ ‘ಸಂಸ್ಕಾರ’ಸೃಷ್ಟಿಸಿದ ವಿವಾದ ಇನ್ಯಾವ ಕನ್ನಡ ಸಿನಿಮಾ ಸಹ ಸೃಷ್ಟಿ ಮಾಡಿದ್ದಿಲ್ಲ.
ಬಂಡಾಯ ಮನಸಿನ ಬ್ರಾಹ್ಮಣ ಮಾಂಸ ಸಹ ಸೇವಿಸಿ ತನ್ನ ಜಾತಿಗೆ ಅಪಚಾರ ಮಾಡಿರುತ್ತಾನೆ. ಆತ ಕಾಲವಾದಾಗ ಅವನ ಸಂಸ್ಕಾರ ಮಾಡುವುದೇ ಫಜೀತಿಗೆ ಬರುತ್ತದೆ. ದೊಡ್ಡ ವಿವಾದವೇ ಆ ಗ್ರಾಮದಲ್ಲಿ ಆಗಿ ಬಿಡುತ್ತದೆ. ಇದಕ್ಕೆ ತೀರ್ಮಾನವನ್ನು ಪ್ರಾಣೇಶಾಚಾರ್ಯರು (ಡಾ ಗಿರೀಶ್ ಕಾರ್ನಾಡ್ ಪಾತ್ರ) ತೆಗೆದು ಕೊಳ್ಳುವುದು ಎಂದು ನಿಶ್ಚಯ ಆಗುತ್ತದೆ.
ಸಂಸ್ಕಾರ ಬುದ್ದಿ ಜೀವಿಗಳ ಹಾಗೂ ಕಲಾತ್ಮಕ ಚಿತ್ರಗಳ ಆರಾಧಕರ ಅತೀವ ನಿರೀಕ್ಷೆ ನಡುವೆ ಬಿಡುಗಡೆ ಆದ ಚಿತ್ರವದು. ಆಗ ತಾನೇ ಚಿತ್ರ ನಿರ್ದೇಶನಕ್ಕೆ ಹಾಗೂ ನಿರ್ಮಾಣಕ್ಕೆ ಕಾಲಿಟ್ಟ ಪಟ್ಟಾಭಿ ರಾಮರೆಡ್ಡಿ ಅವರಿಗೆ ಭಾರಿ ಸಂಕಷ್ಟ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿತ್ತು. ಕಾರಣ ಸೆನ್ಸಾರ್ ಮಂಡಳಿ ಹಾಕಿದ ಅಡ್ಡಗಾಲು. ಆಗಿನ್ನೂ ಸಿನಿಮಾಗಳು ಮದರಾಸಿನಲ್ಲೆ ಸೆನ್ಸಾರ್ ಆಗುತ್ತಿದ್ದವು. ಸೆನ್ಸಾರ್ ತಂಡ ಈ ಚಿತ್ರವನ್ನು ನಿರಾಕರಣೆ ಮಾಡಿತು. ಅದಕ್ಕೆ ಕಾರಣ ಬ್ರಾಹ್ಮಣರ ಭಾವನೆಯನ್ನು ಹಾಗೂ ಸಂಪ್ರದಾಯವನ್ನು ಪ್ರಚೋದಕವಾಗಿ ಕೆಣಕುವುದು.
ನಿರ್ಮಾಪಕ, ನಿರ್ದೇಶಕ ಸೆನ್ಸಾರ್ ಪಡೆಯಲು ದೆಹಲಿಗೆ ತಲುಪಿದರು. ದೆಹಲಿಯ 15 ಮಂದಿ ಸೆನ್ಸಾರ್ ಮಂಡಳಿ ತಂಡ ಮದರಾಸಿನ ಅಭಿಪ್ರಾಯವನ್ನು ಖಂಡಿಸಿತು. ಈ ಚಿತ್ರ ಸಂಸತ್ತಿನಲ್ಲೂ ಸಹ ಸುದ್ದಿ ಮಾಡಿತು. ಆಗಿನ ಕೇಂದ್ರ ಮಂತ್ರಿ ಐ ಕೆ ಗುಜ್ರಾಲ್ ನಿರ್ದೇಶಕರ ಅಹವಾಲನ್ನು ಮಂಡಿಸಿದರು. ದೆಹಲಿಯಲ್ಲಿ ಗೆದ್ದ ಮೇಲೆ ಈ ಸಿನಿಮಾಕ್ಕೆ ಅಲ್ಲಿಯೇ ಒಂದು ವಿಶೇಷ ಪ್ರದರ್ಶನ ಸಹ ಆಯಿತು. ಸಂಸ್ಕಾರ ಚಿತ್ರಕ್ಕೆ ಅನೇಕರು ಪಟ್ಟಾಭಿರಾಮ ರೆಡ್ಡಿ ಅವರನ್ನು ಶ್ಲಾಘಿಸಿದರು.
ಇನ್ನು ಪ್ರಮುಖ ದೃಶ್ಯವನ್ನು ಆಗಿನಶೃಂಗೇರಿ ಸ್ವಾಮಿಗಳ ಹತ್ತಿರ ಅನುಮತಿ ಪಡೆದು ಶಿವಮೊಗ್ಗದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪಟ್ಟಾಭಿರಾಮ ರೆಡ್ಡಿ ಜೊತೆ ನಿಂತಿತ್ತು. ಆದರೆ, ಮದರಾಸ್ ಸೆನ್ಸಾರ್ ಮಂಡಳಿಯಿಂದ ಹಲವಾರು ಟೀಕೆಗಳನ್ನು ಎದುರಿಸಬೇಕಾಯಿತು.