ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಕ್ಷಾಬಂಧನ ಧಾರಾವಾಹಿಯಲ್ಲಿ ವಿರಾಟ್ ಮಹಾದೇವನ್ ಆಗಿ ನಟಿಸಿ ಅದೆಷ್ಟೋ ಹುಡುಗಿಯರ ನಿದ್ದೆ ಗೆಡಿಸಿದ ಹ್ಯಾಂಡ್ ಸಮ್ ಹುಡುಗ ಸಮೀಪ್ ಆಚಾರ್ಯ ಮತ್ತೆ ಕಿರುತೆರೆಗೆ ಮರಳಲಿದ್ದಾರೆ.
ರಕ್ಷಾಬಂಧನದಲ್ಲಿ ವಿರಾಟ್ ಮಹಾದೇವನ್ ಆಗಿ ನಟಿಸಿದ ಸಮೀಪ್ ನಟನೆಗೆ ಮನಸೋಲದವರಿಲ್ಲ. ಸದಾ ಕಾಲ ನಗು ತುಂಬಿದ ಅವರ ಮುದ್ದು ಮುಖ ನೋಡುವುದೇ ಚೆಂದ. ಮನೋಜ್ಞ ಅಭಿನಯದ ಮೂಲಕ ಹುಡುಗಿಯರ ಹಾರ್ಟ್ಗೆ ಕನ್ನ ಹಾಕುತ್ತಿದ್ದ ಸುಂದರಾಂಗ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕಾವ್ಯಾಂಜಲಿ-2ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಉತ್ತರ ಕನ್ನಡ ಸೊಗಡಿನ ಭಾಷೆಯ ಗುಂಡ್ಯಾನ ಹೆಂಡ್ತಿಯ ಮೂಲಕ ಕಿರುತೆರೆ ಯಾನ ಆರಂಭಿಸಿದ ಸಮೀಪ್, ಮೊದಲ ಧಾರಾವಾಹಿಯಲ್ಲೇ ಮನೆ ಮಾತಾದವರು! ಅದಕ್ಕೆ ಕಾರಣವೂ ಇದೆ. ಉಡುಪಿ ಮೂಲದ ಸಮೀಪ್ ಹುಟ್ಟಿ ಬೆಳೆದಿದ್ದು ದೂರದ ಮುಂಬೈನಲ್ಲಿ ಆದರೂ, ಮೊದಲ ಧಾರಾವಾಹಿಯಲ್ಲೇ ಉತ್ತರ ಕನ್ನಡ ಭಾಷೆ ಮಾತನಾಡಿ ಸೈ ಎನಿಸಿಲೊಂಡರು.
ಮೊದಲ ಬಾರಿಗೆ ಚಾಲೆಂಜಿಗ್ ಆಗಿರುವಂತಹ ಪಾತ್ರದಲ್ಲಿ ನಟಿಸಿದ ಈತ ನಂತರ ಬದಲಾದದ್ದು ಸಾಗರ್ ಆಗಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಂಗಾ ಧಾರಾವಾಹಿಯಲ್ಲಿ ಸಾಗರ್ ಆಗಿ ನಟಿಸಿದ್ದರು. ನಂತರ ರಕ್ಷಾಬಂಧನ ಧಾರಾವಾಹಿಯಲ್ಲಿ ವಿರಾಟ್ ಮಹಾದೇವನ್ ಆಗಿ ನಟಿಸಿದ ಸಮೀಪ್ ರಾಜಸ್ಥಾನ್ ಡೈರೀಸ್ ಸಿನಿಮಾದಲ್ಲಿ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿದ್ದಾರೆ.