ಹೈದರಾಬಾದ್:ಕನ್ನಡದ ವರದನಾಯಕ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲಗ್ಗೆ ಹಾಕಿದ್ದ ನಟಿ ಸಮೀರಾ ರೆಡ್ಡಿ ಇದೀಗ ಅದರಿಂದ ಬಹು ದೂರ ಉಳಿದಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಅವರು, ಮೊದಲ ಮಗುವಿಗೆ ಜನ್ಮ ನೀಡಿದ್ದ ವೇಳೆ ಖಿನ್ನತೆಗೊಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಬಣ್ಣದ ಲೋಕ ಬಿಟ್ಟು ಸಂಸಾರ-ಮಕ್ಕಳು ಎಂದು ಬ್ಯುಸಿ ಆಗಿದ್ದ ನಟಿ ಇದೀಗ ತಾವು ನೀಡಿರುವ ಸಂದರ್ಶನವೊಂದರಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 2015ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದ ಸಮೀರಾ ರೆಡ್ಡಿ, ಈ ವೇಳೆ ಖುಷಿ ಪಡುವ ಬದಲಿಗೆ ಖಿನ್ನತೆಗೊಳಗಾಗಿದ್ದರು ಎಂದು ಹೇಳಿಕೊಂಡಿದ್ದಾರೆ.
ವಿಶ್ವ ತಾಯಂದಿರ ದಿನದ ನಿಮಿತ್ತ ತನ್ನ ಮಾತೃತ್ವದ ಬಗ್ಗೆ ಮಾತನಾಡಿರುವ ನಟಿ, ಮಗ ಹ್ಯಾನ್ಸ್ ಹಾಗೂ ಮಗಳು ನೈರಾ ಎಂಬ ಇಬ್ಬರು ಮಕ್ಕಳನ್ನ ಹೊಂದಿದ್ದಾರೆ. ತಾನು ಗರ್ಭಿಣಿಯಾಗಿದ್ದ ವೇಳೆ ದೇಹದ ತೂಕ 105 ಕೆಜಿ ಆಗಿತ್ತು. ದೇಹದಲ್ಲಿ ದಿಢೀರ್ ಬದಲಾವಣೆ ಆಗಿದ್ದರಿಂದ ಅನೇಕ ಕಷ್ಟಪಟ್ಟಿದ್ದೇನೆ. ಪ್ರಸವಾನಂತರ ಖಿನ್ನತೆಗೆ ಸಹ ಒಳಗಾಗಿದ್ದೆ ಎಂದಿದ್ದಾರೆ.