ಹೈದರಾಬಾದ್ (ತೆಲಂಗಾಣ) :ಆಕ್ಷೇಪಾರ್ಹ ವಿಡಿಯೊ ಮತ್ತು ಅವಹೇಳನಕಾರಿ ಟೀಕೆಗಳ ಜೊತೆ ತಮ್ಮ ತೇಜೋವಧೆ ಮಾಡುವ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮೂರು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹುಭಾಷಾ ನಟಿ ಸಮಂತಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಮೂರು ಯೂಟ್ಯೂಬ್ ಚಾನೆಲ್‌ಗಳು ಆಧಾರರಹಿತವಾಗಿ ನನ್ನನ್ನು ತೇಜೋವಧೆ ಮಾಡಿವೆ ಎಂದು ಆರೋಪ ಮಾಡಿರುವ ನಟಿ ಸಮಂತಾ, ಇವುಗಳ ವಿರುದ್ಧ ತತಕ್ಷಣ ಕ್ರಮ ಕೈಗೊಳ್ಳುವಂತೆ ಹೈದರಾಬಾದ್‌ನ ಕೂಕಟ್‌ಪಲ್ಲಿಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ದುರುದ್ದೇಶದಿಂದ ನನ್ನ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ. ವದಂತಿಗಳನ್ನು ಸಹ ಹಬ್ಬಿಸಿದ್ದಾರೆ. ಇದರಿಂದ ಸಮಾಜದಲ್ಲಿ ನನ್ನ ಘನತೆಗೆ ಧಕ್ಕೆಯಾಗಿದೆ. ಇದು ನನ್ನ ವ್ಯಕ್ತಿತ್ವಕ್ಕೆ ಬಹಳ ನೋವು ಉಂಟು ತಂದಿದೆ ಎಂದು ತಮ್ಮ ಮಾನನಷ್ಟ ಮೊಕದ್ದಮೆಯ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಖ್ಯಾತ ವಕೀಲ ಬಾಲಾಜಿ ನಟಿಯ ಪರವಾಗಿ ವಾದ ಮಾಡಲಿದ್ದಾರೆ. ಇನ್ನು ಸಮಂತಾ ಈಗಾಗಲೇ ಕೆಲವು ಮಾಧ್ಯಮಗಳ ವಿರುದ್ಧ ಸೆಡ್ಡು ಹೊಡೆಯುವ ಮೂಲಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇತ್ತೀಚೆಗೂ ಸಹ ಕೆಲವು ಪೋಸ್ಟ್ ಮಾಡಿ ನೋವು ತೋಡಿಕೊಂಡಿದ್ದನ್ನು ಕಾಣಬಹುದು.
ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಿದ್ದಂತೆ ಜಾಲತಾಣದಲ್ಲಿ ಈ ಬಗ್ಗೆ ವದಂತಿಯನ್ನು ಹಬ್ಬಿಸಲಾಯಿತು. ಇನ್ನು ಕೆಲವರು ವಿಚ್ಛೇದನಕ್ಕೆ ಕಾರಣ ಹುಡುಕುವ ಭರಾಟೆಯಲ್ಲಿ ನಟಿಯ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿ ನೀಡಿದ್ದವು. ಇದನ್ನು ಖಂಡಿಸಿರುವ ಸಮಂತಾ ಮಾನನಷ್ಟ ಕೇಸ್ ಹೂಡಿದ್ದಾರೆ.