ಕಂಚಿನ ಕಂಠದ ಗಾನ ಗಂಧರ್ವ, ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಇಂದು ಜೀವಂತವಾಗಿರುತ್ತಿದ್ದರೆ ಅವರಿಗೆ 75 ವರ್ಷವಾಗುತ್ತಿತ್ತು. ಆದ್ರೆ, ಲೌಕಿಕ ಜಗತ್ತಿನಲ್ಲಿ ಎಸ್‌ಪಿಬಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಹಾಡುಗಳು ಚಿರಸ್ಮರಣೀಯವಾಗಿವೆ.
ತಮ್ಮ ಅದ್ಭುತ ಹಾಡುಗಾರಿಕೆಯಿಂದಲೇ ವಿಶ್ವದಾಖಲೆ ಬರೆದಿರುವ ಎಸ್‌ಪಿಬಿ ಯಾವುದೇ ಹಾಡನ್ನಾದರೂ 15 ನಿಮಿಷದಲ್ಲಿ ಅರ್ಥ ಮಾಡಿಕೊಂಡು ಹಾಡುತ್ತಿದ್ದರಂತೆ. ಯಾವುದೇ ವಿಶೇಷ ತರಬೇತಿ ಪಡೆಯದೆ ದೇಶದ ವಿವಿಧ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದು ವಿಶೇಷ ದಾಖಲೆ. ಅಷ್ಟೇ ಅಲ್ಲ, 60ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಯಾವುದೇ ನಟನಿಗಾದರೂ ಎಸ್‌ಪಿಬಿ ಅವರ ಧ್ವನಿ ಹೋಲುತ್ತಿತ್ತು. ಇದೇ ಕಾರಣಕ್ಕೋ ಏನೋ, ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರ ಚಿತ್ರಗಳಿಗೂ ಎಸ್‌ಪಿಬಿ ಧ್ವನಿಯಾಗಿದ್ದಾರೆ.
16 ಭಾಷೆ, 40 ಸಾವಿರಕ್ಕೂ ಅಧಿಕ ಹಾಡುಗಳು, ಮೂರು ತಲೆಮಾರು, ಅನೇಕ ಪ್ರಶಸ್ತಿಗಳು, ಅಪಾರ ಗೌರವ.. ಹೀಗೆ 74 ವರ್ಷದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಾಧನೆಗೆ ಗಡಿರೇಖೆಗಳ ಅಡ್ಡಿ ಇರಲಿಲ್ಲ. 'ನನಗೆ ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರಕಿಲ್ಲ. ಮುಂದಿನ ಜನ್ಮವೊಂದಿದ್ದರೆ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ' ಎಂದು ಅವರೊಮ್ಮೆ ಕರುನಾಡಿಗೆ ಮನದಾಳದಿಂದ ಕೃತಜ್ಞತೆ ಸಲ್ಲಿಸಿದ್ದರು.
1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದ ಎಸ್‌ಪಿಬಿ, ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ಹಿನ್ನೆಲೆಗಾಯಕನಾಗಿ ಅವರು ಹಾಡಿದ ಎರಡನೇ ಹಾಡು ಕನ್ನಡದ್ದಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಇವರ ಕಂಠಸಿರಿ ಮೇಳೈಸಿದೆ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿಯವರಿಂದಲೇ ಪ್ರೇರಣೆ ಪಡೆದ ಎಸ್‌ಪಿಬಿ ಹಾಡುವುದು, ಹಾರ್ಮೋನಿಯಂ ಹಾಗೂ ಕೊಳಲನ್ನು ತಮ್ಮಷ್ಟಕ್ಕೆ ತಾವೇ ನುಡಿಸುತ್ತಾ ಸಂಗೀತ ಲೋಕದತ್ತ ಆಕರ್ಷಣೆಗೊಂಡರಂತೆ. ನಂತರ ವಿದ್ಯಾರ್ಥಿಯಾಗಿ ಶಾಸ್ತ್ರೀಯ ಸಂಗೀತಾಭ್ಯಾಸವನ್ನೂ ಮಾಡಿದರು.