ರೈತರ ಕುರಿತಾದ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಬರ್ತಿರೋದು ಕಡಿಮೆ. ಇದೀಗ ರೈತರ ಕುರಿತಾದ 'ಶ್ರೀಮಂತ' ಎಂಬ ಸಿನಿಮಾವೊಂದು ತಯಾರಾಗುತ್ತಿದೆ. ಆದರೆ, ತೆಲುಗಿನ ಶ್ರೀಮಂತುಡು ಸಿನಿಮಾಗೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ.
ಹಂಸಲೇಖ ಸಂಗೀತ ನಿರ್ದೇಶನದ 'ಶ್ರೀಮಂತ' ಚಿತ್ರದಲ್ಲಿ ಎಸ್ಪಿಬಿ ಗಾಯನ - undefined
ರೈತರ ಕುರಿತಾದ 'ಶ್ರೀಮಂತ' ಎಂಬ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗುತ್ತಿದ್ದು ಈ ಸಿನಿಮಾಗಾಗಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಖ್ಯಾತ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸುಂದರವಾದ ಗೀತೆಯೊಂದನ್ನು ಹಾಡಿದ್ಧಾರೆ.
![ಹಂಸಲೇಖ ಸಂಗೀತ ನಿರ್ದೇಶನದ 'ಶ್ರೀಮಂತ' ಚಿತ್ರದಲ್ಲಿ ಎಸ್ಪಿಬಿ ಗಾಯನ](https://etvbharatimages.akamaized.net/etvbharat/images/768-512-2965315-thumbnail-3x2-shrimanta.jpg)
ರಾಷ್ಟ್ರಕವಿ ಕುವೆಂಪು ರಚನೆಯ ರೈತ ಗೀತೆ ‘ನೇಗಿಲ ಹಿಡಿದ ಹೊಲದೊಳು ಹಾಡುತಾ‘ ಎಂಬ ಹಾಡನ್ನು ಡಾ. ಸಿ.ಅಶ್ವಥ್ ಹಾಡಿದ್ದರು. ಡಾ.ರಾಜ್ ಹಾಗೂ ಹಿರಿಯ ನಟ ಅನಂತ್ನಾಗ್ ಆ ಅದ್ಭುತ ಗೀತೆಯಲ್ಲಿ ಕಾಣಿಸಿಕೊಂಡಿದ್ದರು. 1983 ರಲ್ಲಿ ತೆರೆಕಂಡ 'ಕಾಮನಬಿಲ್ಲು' ಸಿನಿಮಾದಲ್ಲಿ ಸ್ವಲ್ಪ ಬದಲಾವಣೆಯೊಂದಿಗೆ ಈ ಹಾಡನ್ನು ಬಳಸಿಕೊಳ್ಳಲಾಗಿತ್ತು. ನಂತರ ‘ದೊರೆ’ ಸಿನಿಮಾದಲ್ಲಿ ಡಾ. ರಾಜ್ ಹಾಡಿದ ‘ರೈತ ರೈತ ರೈತ.. ಅನ್ನ ಕೊಡುವ ದಾತ‘ ಎಂಬ ಹಾಡು ಕೂಡಾ ಸಾಕಷ್ಟು ಫೇಮಸ್ ಆಗಿತ್ತು.
ಇದೀಗ ಅಷ್ಟೇ ಪರಿಣಾಮಕಾರಿಯಾದ ರೈತ ಗೀತೆಯೊಂದನ್ನು ‘ಶ್ರೀಮಂತ‘ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಈ ಹಾಡನ್ನು ಹಾಡಿದ್ದಾರೆ. ಮಳೆ ಮುನಿದರೆ ಸಂತ... ಜನಪದ ಸಂತ... ಎಂಬ ಈ ಹಾಡನ್ನು ಹಂಸಲೇಖ ಅವರೇ ರಚಿಸಿದ್ದಾರೆ. ಚಿತ್ರದಲ್ಲಿ 9 ಹಾಡುಗಳಿದ್ದು ಇತ್ತೀಚೆಗೆ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಹಾಸನ್ ರಮೇಶ್ ನಿರ್ದೇಶಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಸಿನಿಮಾವನ್ನು ನಾರಾಯಣಪ್ಪ ಎಂಬುವರು ನಿರ್ಮಿಸಿದ್ದಾರೆ. ಕ್ರಾಂತಿ, ವೈಷ್ಣವಿ ಮೆನನ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.