ಕರ್ನಾಟಕ

karnataka

ETV Bharat / sitara

ಎಸ್​​ಪಿಬಿ ಕಂಠದಲ್ಲಿ ಮೂಡಿ ಬಂದ ಕನ್ನಡಾಭಿಮಾನ ಮೆರೆಯುವ ಸುಮಧುರ ಹಾಡುಗಳಿವು...!

ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಗಾಯಕರಾಗಿ, ನಟರಾಗಿ ಅವರು ನೀಡಿದ ಕೊಡುಗೆ ಅಪಾರ. ಅವರು ಹಾಡಿರುವ ಕನ್ನಡಾಭಿಮಾನ ಮೆರೆಯುವ ಬಹಳಷ್ಟು ಹಾಡುಗಳು ಇಂದಿಗೂ ಹಸಿರಾಗಿವೆ.

SPB Kannada love songs
ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

By

Published : Sep 25, 2020, 8:21 PM IST

ಇಂಜಿನಿಯರ್ ಆಗಬೇಕೆಂದುಕೊಂಡು ಸಂಗೀತವೂ ಕಲಿಯದೆ ಶ್ರೇಷ್ಠ ಗಾಯಕರಾಗಿ ಹೆಸರು ಮಾಡಿದ ಎಸ್​​.ಪಿ. ಬಾಲಸುಬ್ರಹ್ಮಣ್ಯಂ, ಸಾಧನೆ ಮಾಡಬೇಕು ಎಂದುಕೊಂಡಿರುವವರಿಗೆ ನಿಜಕ್ಕೂ ಸ್ಪೂರ್ತಿಯಾಗಿರುವವರು. ಗಾಯಕ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ನಿರ್ಮಾಪಕ, ನಟನಾಗಿ ಹೆಸರು ಮಾಡಿದ ಬಹುಮುಖ ಪ್ರತಿಭೆ, ಸಾಧನೆಯ ಮೇರು ಪರ್ವತ ಎಸ್​​.ಪಿ. ಬಾಲಸುಬ್ರಹ್ಮಣ್ಯಂ.

ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

ಸುಮಾರು 16 ಭಾಷೆಗಳಲ್ಲಿ ಗಾಯನದ ಚಾತುರ್ಯ ತೋರಿಸಿರುವ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಮನ್ನಣೆ ಎಲ್ಲೂ ದೊರೆತಿಲ್ಲ. ಅವರು ಹಾಡಿರುವ ಕನ್ನಡಾಭಿಮಾನದ ಬಹುತೇಕ ಎಲ್ಲಾ ಹಾಡುಗಳು ಹಿಟ್ ಆಗಿವೆ.

'ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ' ಎಂದು ಹೇಳಿದ್ದ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ ಮೊಟ್ಟ ಮೊದಲ ಕನ್ನಡಾಭಿಮಾನದ ಹಾಡು 1983ರಲ್ಲಿ ಬಿಡುಗಡೆಯಾದ 'ತಿರುಗು ಬಾಣ' ಚಿತ್ರದ್ದು. ಇದೇ ನಾಡು....ಇದೇ ಭಾಷೆ ಎಂದೆಂದೂ ನನ್ನದಾಗಿರಲಿ, ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ... ಎಂಬ ಹಾಡು ಇಂದಿಗೂ ಬಹಳ ಫೇಮಸ್. ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ, ರಾಜ್ಯಾದ್ಯಂತ ಈ ಹಾಡು ಕೇಳಿ ಬರುತ್ತೆ. ಆರ್​​.ಎನ್​. ಜಯಗೋಪಾಲ್ ಬರೆದಿದ್ದ ಪದಗಳಿಗೆ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಧ್ವನಿಯಾಗಿದ್ದರು. ಸಂಗೀತ ನಿರ್ದೇಶಕ ಸತ್ಯಂ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ್ದರು.

ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

ಎಸ್​​​ಪಿಬಿ, ಕರುನಾಡ ತಾಯಿಯನ್ನು ಕೊಂಡಾಡಿದ ಹಾಡು 'ನಾನು ನನ್ನ ಹೆಂಡ್ತಿ' ಚಿತ್ರದ ಕರುನಾಡ ತಾಯಿ ಸದಾ ಚಿನ್ಮಯಿ.. ಎಂಬ ಹಾಡು. ರವಿಚಂದ್ರನ್​ ಹಾಗೂ ಊರ್ವಶಿ ನಟಿಸಿದ್ದ ಸಿನಿಮಾದ ಈ ಹಾಡು ಪ್ರತಿಯೊಬ್ಬ ಕನ್ನಡಿಗನೂ ಚಪ್ಪಾಳೆ ತಟ್ಟುವಂತೆ ಮಾಡಿತ್ತು. ನಾದಬ್ರಹ್ಮ ಹಂಸಲೇಖ ಬರೆದ ಹಾಡಿಗೆ ಶಂಕರ್ ಗಣೇಶ್ ಸಂಗೀತ ನೀಡಿದ್ದರು.

ನಂತರ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಎರಡು ಸಿನಿಮಾಗಳಿಗೆ ಹಾಡಿದ ಎರಡು ಹಾಡುಗಳು ಸೂಪರ್ ಹಿಟ್ ಎನಿಸುತ್ತದೆ. ಅನಂತ್ ನಾಗ್ ಅಭಿನಯದ 'ಒಂದು ಸಿನಿಮಾ ಕಥೆ' ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ 'ಸೋಲಿಲ್ಲದ ಸರದಾರ'. ಅನಂತ್ ನಾಗ್ ನಮ್ಮ ಕನ್ನಡದ ಎಲ್ಲಾ ಕಣ್ಮಣಿಗಳನ್ನು ಆರಾಧಿಸುವ ಹಾಡದು. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ... ಆರಾಧಿಸುವೆ.. ಎಂದು ಹಾಡುವ ಹಾಡು ಬಹಳ ಹಿಟ್ ಆಗಿತ್ತು. ಶ್ಯಾಮ್ ಸುಂದರ್ ಕುಲಕರ್ಣಿ ಬರೆದಿದ್ದ ಈ ಹಾಡಿಗೆ ರಾಜನ್ ನಾಗೇಂದ್ರ ಟ್ಯೂನ್ ಹಾಕಿದ್ದರು.

ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು
ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

ಇದರೊಂದಿಗೆ 'ಸೋಲಿಲ್ಲದ ಸರದಾರ' ಚಿತ್ರಕ್ಕಾಗಿ ಹಂಸಲೇಖ ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸಿದ್ದ ಕನ್ನಡ ರೋಮಾಂಚನವೀ ಕನ್ನಡ....ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ.. ಎಂಬ ಹಾಡು ಎಸ್​​​​ಪಿಬಿ ಕಂಠದಿಂದ ಸುಮಧುರವಾಗಿ ಮೂಡಿ ಬಂದಿತ್ತು. ಅಂಬರೀಶ್ ಅವರೇ ಅಭಿನಯಿಸಿರುವ 'ಅಣ್ಣಾವ್ರು' ಚಿತ್ರದ ಕನ್ನಡಕ್ಕಾಗಿ ಜನನ....ಕನ್ನಡಕ್ಕಾಗಿ ಮರಣ... ಹಾಡು ಕೂಡಾ ಎಸ್​​​ಪಿಬಿ ಅವರ ಧ್ವನಿಯಲ್ಲೇ ಮೂಡಿ ಬಂದಿತ್ತು.

ಡಾ. ವಿಷ್ಣುವರ್ಧನ್ ಅಭಿನಯದ ಮೊದಲ ಚಿತ್ರ 'ನಾಗರಹಾವು' ಹಾಗೂ ಕೊನೆಯ ಸಿನಿಮಾ 'ಆಪ್ತರಕ್ಷಕ' ಚಿತ್ರದವರೆಗೂ ಅವರಿಗಾಗಿ ಹಾಡಿದ ಏಕೈಕ ಗಾಯಕ ಎಸ್​​​​​ಪಿಬಿ. ಸಾಹಸ ಸಿಂಹನ ಅನೇಕ ಸಿನಿಮಾಗಳಲ್ಲಿ ಎಸ್​​​​ಪಿಬಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. 'ಕೃಷ್ಣ ರುಕ್ಮಿಣಿ' ಚಿತ್ರದ ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು......'ಸಿಂಹಾದ್ರಿಯ ಸಿಂಹ' ಚಿತ್ರದ ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ... ಎಂಬ ಹಾಡನ್ನು ಎಸ್​​​​ಪಿಬಿ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಇದರೊಂದಿಗೆ 'ಅಪ್ಪಾಜಿ' ಚಿತ್ರದ ಏನೇ ಕನ್ನಡತಿ ನೀ ಯಾಕೆ ಇಂಗಾಡ್ತಿ... ಎಂಬ ಹಾಡು ಕೂಡಾ ಬಹಳ ಫೇಮಸ್. ಇದರೊಂದಿಗೆ 'ವೀರಪ್ಪನಾಯ್ಕ' ಚಿತ್ರದ ಭಾರತಾಂಬೆ ನಿನ್ನ ಜನ್ಮದಿನ...ಭಾರತಿಯರ ಶೌರ್ಯ ಮೆರೆವ ದಿನ...ಎಂಬ ಹಾಡು ದೇಶಾಭಿಮಾನ ಎತ್ತಿ ತೋರಿಸುವ ಹಾಡಾಗಿತ್ತು.

ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

1999ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅಭಿನಯದ 'ಎ.ಕೆ. 47' ಸಿನಿಮಾದ ಓ ಮೈ ಸನ್ ಎಂಬ ಹಾಡು ಸಖತ್ ಹಿಟ್ ಆಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಒಬ್ಬ ದೇಶಭಕ್ತ ತಂದೆ ತನ್ನ ಮಗನಿಗೆ ನೀನೂ ಕೂಡಾ ದೇಶಾಭಿಮಾನಿಯಾಗು ಎಂದು ಹೇಳುವ ಹಾಡು. ಹಂಸಲೇಖ ಈ ಹಾಡಿಗೆ ಸಾಹಿತ್ಯ ಬರೆದು ಮ್ಯೂಸಿಕ್ ನೀಡಿದ್ದ ಹಾಡು ಕನ್ನಡಾಭಿಮಾನದೊಂದಿಗೆ ದೇಶಾಭಿಮಾನವನ್ನು ಹೆಚ್ಚಿಸುತ್ತದೆ.

ಚಿತ್ರಗೀತೆ ಹಾಗೂ ಭಕ್ತಿಗೀತೆಗಳು ಸೇರಿ ಕನ್ನಡದಲ್ಲೇ ಸುಮಾರು 10 ಸಾವಿರ ಹಾಡುಗಳನ್ನು ಹಾಡಿರುವ ಎಸ್​​​​ಪಿಬಿ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಎದೆ ತುಂಬಿ ಹಾಡೆದೆನು' ಕಾರ್ಯಕ್ರಮದ ಮೂಲಕ ಕನ್ನಡಿಗರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಡುಗಳು ಮಾತ್ರ ಅಜರಾಮರ.

ಎಸ್​​​​​​​ಪಿಬಿ ಹಾಡಿರುವ ಕನ್ನಡಾಭಿಮಾನದ ಹಾಡುಗಳು

ABOUT THE AUTHOR

...view details