ಕರ್ನಾಟಕ

karnataka

ETV Bharat / sitara

'ಪಂಪ' ಚಿತ್ರಕ್ಕಾಗಿ ಜೊತೆಯಾದ ಎಸ್​. ಮಹೇಂದರ್​​​​-ನಾದಬ್ರಹ್ಮ ಹಂಸಲೇಖ

ಹಂಸಲೇಖ ಹಾಗೂ ಎಸ್​​​​. ಮಹೇಂದರ್ ಬಹಳ ವರ್ಷಗಳ ನಂತರ ಮತ್ತೆ ಒಂದಾಗಿದ್ದು 'ಪಂಪ' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸಿದರೆ ಹಂಸಲೇಖ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಸ್ಕ್ರಿಪ್ಟ್​ ಕೆಲಸದಲ್ಲೂ ಹಂಸಲೇಖ ಭಾಗಿಯಾಗಿದ್ದಾರೆ.

Pampa Kannada movie
'ಪಂಪ'

By

Published : Oct 1, 2020, 10:59 AM IST

ಖ್ಯಾತ ನಿರ್ದೇಶಕ ಎಸ್. ಮಹೇಂದರ್ ಮತ್ತೆ ಸಿನಿಮಾ ನಿರ್ದೇಶನದತ್ತ ಬಂದಿದ್ದಾರೆ. ನಾದಬ್ರಹ್ಮ ಹಂಸಲೇಖ ಹಾಗೂ ಎಸ್.ಮಹೇಂದರ್ ಜೋಡಿ ಜೊತೆಯಾಗಿ 'ಪಂಪ' ಸಿನಿಮಾ ಸಿದ್ಧತೆ ಮಾಡಿಕೊಂಡಿದೆ. ಈ ಚಿತ್ರಕ್ಕೆ ಮೊದಲು ಕನ್ನಡ ಮೇಷ್ಟ್ರು ಎಂಬ ಹೆಸರಿಡಲಾಗಿತ್ತು. ಆದರೆ ಕವಿರಾಜ್ ನಿರ್ದೇಶನದ ಕಾಳಿದಾಸ ಕನ್ನಡ ಮೇಷ್ಟ್ರು ಟೈಟಲ್​​​​ ಈಗಾಗಲೇ ಇರುವುದರಿಂದ ಚಿತ್ರಕ್ಕೆ ಪಂಪ ಎಂದು ಮರುನಾಮಕರಣ ಮಾಡಲಾಗಿದೆ.

'ಪಂಪ' ಚಿತ್ರದ ದೃಶ್ಯ

ಆದಿಕವಿ ಪಂಪ ಕನ್ನಡಾಭಿಮಾನಿ. ಈ ಚಿತ್ರದ ನಾಯಕ ಪಂಚಳ್ಳಿ ಪರಶಿವಮೂರ್ತಿ ಕೂಡಾ ಪಂಪನಂತೆಯೇ ಕನ್ನಡ ಪ್ರೇಮಿ. ಈತ ಕೂಡಾ ಪಂಪ ಎಂದೇ ಹೆಸರಾಗಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಅಭಿಮಾನ ಇರುವಂತ ವ್ಯಕ್ತಿ. ಇದೆಲ್ಲದರೊಂದಿಗೆ ಕಥೆ , ಕಾದಂಬರಿ, ಕಾವ್ಯಗಳನ್ನು ರಚಿಸುತ್ತಾ ಖ್ಯಾತರಾದವರು. ಹೀಗಿರುವಾಗ ಅಜಾತಶತ್ರು ಪಂಪನ ಕೊಲೆ ಆಗುತ್ತದೆ. ಯಾರ ಮನಸ್ಸನ್ನೂ ನೋಯಿಸದ, ಯಾರಿಂದಲೂ ದ್ವೇಷಕ್ಕೆ ಒಳಗಾಗದ ಪಂಪ ಕೊಲೆಯಾಗಿದ್ದು ಯಾರಿಂದ...?ಇದಕ್ಕೆ ಕಾರಣ ಏನು..? ಎಂಬುದೇ ಚಿತ್ರದ ಕಥೆ. ಒಟ್ಟಿನಲ್ಲಿ ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ.

'ಪಂಪ'

ಕೌಟುಂಬಿಕ, ಮಹಿಳಾ ಪ್ರಧಾನ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಹೆಸರಾಗಿದ್ದ ಎಸ್. ಮಹೇಂದರ್ ಈ ಚಿತ್ರದ ಬಗ್ಗೆ ಮಾತನಾಡಿ, 'ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದೇನೆ. ಆದರೆ ಕನ್ನಡ ಮತ್ತು ಕನ್ನಡಿಗನ ಕುರಿತಾದ ಪಂಪ ಸಿನಿಮಾ ನನ್ನ ಪಾಲಿಗೆ ದೊರೆತಿದ್ದೇ ಅದೃಷ್ಟ. ಪ್ರತಿಯೊಬ್ಬ ಕನ್ನಡಿಗರೂ ನೋಡಲೇಬೇಕಾದ ಕಂಟೆಂಟ್ ಈ ಚಿತ್ರದಲ್ಲಿ ಅಡಕವಾಗಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ನನಗೆ ಬಹಳ ಹೆಮ್ಮೆಯಾಗುತ್ತಿದೆ' ಎಂದಿದ್ದಾರೆ.

'ಪಂಪ' ಚಿತ್ರೀಕರಣದಲ್ಲಿ ಎಸ್​. ಮಹೇಂದರ್

ಈ ಸಿನಿಮಾ ಆರಂಭವಾಗಿದ್ದರ ಹಿಂದೆ ಒಂದು ಕಥೆಯಿದೆ. ಟೋಟಲ್ ಕನ್ನಡ ಎಂಬ ಮಳಿಗೆ ನಡೆಸುತ್ತಾ ಸಾಹಿತ್ಯ, ಸಿನಿಮಾ ವಲಯದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ವಿ. ಲಕ್ಷ್ಮೀಕಾಂತ್ ಎಂಬುವರಿಗೆ ಮೊದಲಿನಿಂದಲೂ ಒಂದು ಸಿನಿಮಾ ಮಾಡಬೇಕು ಎಂಬ ಹಂಬಲವಿತ್ತು. ಮೂರು ವರ್ಷಗಳ ಹಿಂದೆ ತಾವೇ ಒಂದು ಕಥೆಯ ಎಳೆಯನ್ನು ಸಿದ್ಧಪಡಿಸಿದ್ದರು. ನಂತರ ಹಂಸಲೇಖ ಮತ್ತು ಮಹೇಂದರ್ ಜೊತೆಯಾದ ಮೇಲೆ ಕಥೆ ಸಾಕಷ್ಟು ಬದಲಾಯಿತು. ಹಂಸಲೇಖ ಕೂಡಾ ಸ್ಕ್ರಿಪ್ಟ್ ರಚನೆಯಲ್ಲಿ ಭಾಗಿಯಾಗಿದ್ದು ತಂಡಕ್ಕೆ ಬಲ ಬಂದಂತಾಗಿತ್ತು. ಇದರ ಪ್ರತಿಫಲವೇ ಪಂಪ ಸಿನಿಮಾ.

ನಿರ್ದೇಶಕ ಎಸ್​​​. ಮಹೇಂದರ್

ಕೀ ಕ್ರಿಯೇಷನ್ಸ್ ಸಂಸ್ಥೆ ಅಡಿಯಲ್ಲಿ ವಿ. ಲಕ್ಷ್ಮಿಕಾಂತ್​​​​​​​​ 'ಪಂಪ' ಚಿತ್ರವನ್ನು ನಿರ್ಮಿಸಿದ್ದಾರೆ. ಸಂಗೀತ ಮತ್ತು ಸಾಹಿತ್ಯ ಹಂಸಲೇಖ ಅವರದ್ದು. ರಮೇಶ್ ಬಾಬು ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನ, ಮಹೇಶ್ ದೇವ್ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಪಂಪನ ಪಾತ್ರದಲ್ಲಿ ಕೀರ್ತಿ ಭಾನು, ನಾಯಕಿ ಆಗಿ ಸಂಗೀತ ನಟಿಸಿದ್ದಾರೆ. ಇವರೊಂದಿಗೆ ಶ್ರೀನಿವಾಸಪ್ರಭು, ರವಿ ಭಟ್, ಚಿಕ್ಕಹೆಜ್ಜಾಜಿ ಮಹಾದೇವ್ ಹಾಗೂ ಇನ್ನಿತರರು ಪಂಪನಿಗೆ ಜೊತೆಯಾಗಿದ್ದಾರೆ.

ABOUT THE AUTHOR

...view details