ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ' ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೊಂದು ವಾರದ ಪ್ಯಾಚ್‍ವರ್ಕ್ ಮುಗಿದರೆ, ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಂತಾಗುತ್ತದೆ. ಈ ಮಧ್ಯೆ, `'ಸಪ್ತ ಸಾಗರದಾಚೆ ಎಲ್ಲೋ' ಎಂಬ ಅವರ ಮುಂದಿನ ಚಿತ್ರದ ಪ್ರೀ - ಪ್ರೊಡಕ್ಷನ್ ಕೆಲಸಗಳು ಬಹಳ ಜೋರಾಗಿ ನಡೆದಿದ್ದು, ನಾಯಕಿಯ ಆಯ್ಕೆಯೂ ಆಗಿದೆ.
ಚಿತ್ರಕ್ಕೆ ರುಕ್ಮಿಣಿ ವಸಂತ್ ಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಇಂದು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ರುಕ್ಮಿಣಿ ಬಗ್ಗೆ ಗೊತ್ತಿಲ್ಲದವರು, ಈಕೆ ಯಾರೋ ಹೊಸಬರಿರಬೇಕು ಅಂದುಕೊಂಡಿರಬಹುದು. ರುಕ್ಮಿಣಿ ಇದಕ್ಕೂ ಮುನ್ನ ಎಂ.ಜಿ. ಶ್ರೀನಿವಾಸ್ ಅಭಿನಯದ ಮತ್ತು ನಿರ್ದೇಶನದ `ಬೀರ್‍ಬಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿರುವುದರಿಂದ ಮತ್ತು ಈ ಮಧ್ಯೆ ರುಕ್ಮಿಣಿ ಯಾವುದೇ ಚಿತ್ರದಲ್ಲೂ ನಟಿಸಿಲ್ಲವಾದ್ದರಿಂದ ಆಕೆಯ ಬಗ್ಗೆ ಮರೆತು ಹೋಗುವಂತೆ ಆಗಿದೆ. ಈಗ `ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರುಕ್ಮಿಣಿ ಬಹಳ ಇಂಟೆನ್ಸ್ ಆದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇನ್ನು,`ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಈ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ರಕ್ಷಿತ್ ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರದ ಚಿತ್ರೀಕರಣ ಬೇರೆ ಊರುಗಳಲ್ಲಿ ಮಾಡಬೇಕಿಲ್ಲವಂತೆ.