ಹೈದರಾಬಾದ್ :ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಇಂದು ಗುಡ್ ನ್ಯೂಸ್ ನೀಡಿದೆ. ಚಿತ್ರೀಕರಣ ಮುಕ್ತಾಯಗೊಂಡಿರುವುದನ್ನು ತಿಳಿಸಿದ್ದು, ನಾಯಕರಾದ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಅವರು ಎರಡು ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಶೀಘ್ರದಲ್ಲೇ ಉಳಿದ ಭಾಷೆಯ ಡಬ್ಬಿಂಗ್ ಮುಗಿಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಿರ್ದೇಶಕ ರಾಜಮೌಳಿ ಅವರೂ ತಮ್ಮ ಟ್ವಿಟರಿನಲ್ಲಿ ರಾಮ್ ಚರಣ್ ಹಾಗೂ ಜೂ. ಎನ್‌ಟಿಆರ್ ಬೈಕ್ ಮೇಲೆ ತೆರಳುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಮೈ ಹೀರೋಸ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಚಿತ್ರೀಕರಣ ವೇಳೆಯಲ್ಲಿ ತೆಗೆಯಲಾದ ಈ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವರ್ಷ ತೆರೆ ಕಾಣಲಿರುವ ಆರ್‌ಆರ್‌ಆರ್ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಕೇವಲ 2 ಸಾಂಗ್ ಮಾತ್ರ ಬಾಕಿ ಉಳಿದಿವೆ. ಶೀಘ್ರದಲ್ಲೇ ಅವುಗಳ ಚಿತ್ರೀಕರಣವನ್ನೂ ಮುಗಿಸಲಾಗುತ್ತದೆ.
ಈ ಸಿನಿಮಾ ಅಕ್ಟೋಬರ್ 13ರಂದು 7 ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುವ ಸಾಧ್ಯತೆಯಿದೆ. ಬಾಹುಬಲಿಯಂತಹ ಸೂಪರ್ ಸಿನಿಮಾ ನೀಡಿರುವ ನಿರ್ದೇಶಕ ರಾಜಮೌಳಿ ಅವರು 2018ರಲ್ಲಿ ಆರ್‌ಆರ್‌ಆರ್ ಸಿನಿಮಾ ಕೈಗೆತ್ತಿಕೊಂಡರು.
ಈ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್ ಅಭಿನಯಿಸುತ್ತಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಬಾಲಿವುಡ್ ನಟಿ ಅಲಿಯಾ ಭಟ್, ಅಜಯ್ ದೇವಗನ್, ಸಮುದ್ರ ಖಣಿ, ಕೆಲವು ಅಂತಾರಾಷ್ಟ್ರೀಯ ನಟರು ಪೋಷಕ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಡಿವಿವಿ ದಾನಯ್ಯ ಹಾಗೂ ಡಿವಿವಿ ಎಂಟರ್‌ಟೈನ್‍ಮೆಂಟ್ ನಿರ್ಮಿಸುತ್ತಿದ್ದು, ಇದು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.