ಕನ್ನಡ ಚಿತ್ರರಂಗದಲ್ಲಿ 12 ವರ್ಷಗಳನ್ನು ಪೂರೈಸಿರುವ ಮಾಸ್ಟರ್ ಪೀಸ್ ಯಶ್, ವಿಶ್ವವೇ ಗುರುತಿಸುವ ಸ್ಟಾರ್ ಹೀರೋ ಆಗಿದ್ದಾರೆ. 'ಜಂಭದ ಹುಡುಗಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯಶ್, ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಡಾ ರಾಜ್ ಕುಮಾರ್ ಸಿನಿಮಾಗಳನ್ನು ನೋಡಿ, ನಾನು ಸಿನಿಮಾ ಹೀರೋ ಆಗಬೇಕು ಎಂದು ಚಿಕ್ಕ ವಯಸ್ಸಿನಿಂದಲೂ ಕನಸು ಕಂಡಿದ್ದ ಯಶ್, ಆ ಕನಸನ್ನು ನನಸು ಮಾಡಿಕೊಂಡಿರುವ ಅದೃಷ್ಟವಂತ. 12 ವರ್ಷದ ಸಿನಿಮಾ ಜರ್ನಿಯಲ್ಲಿ ಯಶ್, 17 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಚಿತ್ರಗಳಲ್ಲಿ ಕೆಲವು ಯಶ್ ಸಿನಿ ಕರಿಯರ್ನಲ್ಲಿ ಎಂದೂ ಮರೆಯಲಾರದ ಸಿನಿಮಾಗಳಿವೆ.
2008 ರಲ್ಲಿ ತೆರೆ ಕಂಡ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಯಶ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಾರೆ. ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರವನ್ನು ನಿರ್ಮಾಪಕ ಇ. ಕೃಷ್ಣಪ್ಪ 3 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣ ಮಾಡ್ತಾರೆ. ಯಶ್ ಲವರ್ ಬಾಯ್ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗ್ತಾರೆ. ಈ ಚಿತ್ರ ನೂರು ದಿನಗಳು ಪ್ರದರ್ಶನ ಕಾಣುವ ಮೂಲಕ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ. ಅಲ್ಲಿಂದ ಯಶ್ ಸ್ಯಾಂಡಲ್ವುಡ್ನಲ್ಲಿ ಭರವಸೆ ನಾಯಕ ಆಗ್ತಾರೆ.
ಮೊಗ್ಗಿನ ಮನಸು ನಂತರ ಯಶ್, ಕಳ್ಳರ ಸಂತೆ, ಗೋಕುಲದಂತ ಸಿನಿಮಾ ಮಾಡ್ತಾರೆ. ಆದರೆ ಈ ಸಿನಿಮಾಗಳು ಯಶ್ಗೆ ಅಷ್ಟೊಂದು ಹೆಸರು ನೀಡುವುದಿಲ್ಲ. 2010ರಲ್ಲಿ ತೆರೆಕಂಡ 'ಮೊದಲಾ ಸಲ' ಚಿತ್ರ ಯಶ್ ಕೈ ಹಿಡಿಯುತ್ತೆ. ಈ ಚಿತ್ರದಲ್ಲಿ ಯಶ್ಗೆ ಭಾಮಾ ಜೋಡಿಯಾಗಿರುತ್ತಾರೆ. ಅಪ್ಪ ಮಗಳ ಬಾಂಧವ್ಯದ ಕಥೆ ಆಧರಿಸಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪುರುಷೋತ್ತಮ್ ನಿರ್ದೇಶನವಿದ್ದ, ಈ ಚಿತ್ರವನ್ನು ನಿರ್ಮಾಪಕ ಯೋಗೀಶ್ ನಾರಾಯಣ್ 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ರು. ಆ ದಿನಗಳಲ್ಲಿ ಮೊದಲಾ ಸಲ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಯಶ್ಗೆ ಸ್ಟಾರ್ ಡಮ್ ತಂದು ಕೊಡುತ್ತೆ.
ಬೆಂಗಳೂರಿನ ರೌಡಿಸಂ ಬಗ್ಗೆ ತಯಾರಾದ ಯಶ್ ಸಿನಿಮಾ 'ರಾಜಧಾನಿ'. ಈ ಚಿತ್ರವನ್ನು ಸೌಮ್ಯ ಸತ್ಯನ್ ಎಂಬುವವರು 6 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣದ ಜೊತೆಗೆ ನಿರ್ದೇಶನ ಕೂಡಾ ಮಾಡುತ್ತಾರೆ. ಈ ಚಿತ್ರ ಕೂಡಾ ಯಶ್ಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಡುತ್ತೆ.
ಮಂಡ್ಯ ಭಾಷೆಯ ಸೊಗಡಿನಲ್ಲಿ ಬಂದ ಚಿತ್ರ 'ಕಿರಾತಕ'. ಈ ಚಿತ್ರದಲ್ಲಿ ಯಶ್ ಮಂಡ್ಯ ಹೈದನ ಪಾತ್ರದಲ್ಲಿ ಮಂಡ್ಯ ಭಾಷೆಯ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ಪ್ರೇಕ್ಷಕರಿಗೆ ಇಷ್ಟ ಆಗ್ತಾರೆ. ಪ್ರದೀಪ್ ರಾಜ್ ನಿರ್ದೇಶನದ ಕಿರಾತಕ ಚಿತ್ರವನ್ನು ಶರವಣಮೂರ್ತಿ 3 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಯಶ್ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿತು.
ಯಶ್ ಸಿನಿಮಾ ಕೆರಿಯರ್ನಲ್ಲಿ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟ ಚಿತ್ರ 'ಗೂಗ್ಲಿ'. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ 5 ಕೋಟಿ ಬಜೆಟ್ನಲ್ಲಿ ಹಣ ಹೂಡಿದ್ದರು. ಗೂಗ್ಲಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಯಶ್ಗೆ ಹೆಚ್ಚಿನ ಹೆಸರು ತಂದುಕೊಡುತ್ತದೆ.