ನಾಳೆ ಮೇ 1, ಕಾರ್ಮಿಕರ ದಿನ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೊರೊನಾ ವೈರಸ್ ಕನ್ನಡ ಚಿತ್ರರಂಗದ ಸಿನಿಮಾ ಬಿಡುಗಡೆಯನ್ನ ಆಪೋಶನ ತೆಗೆದುಕೊಂಡು ಬಿಟ್ಟಿದೆ.
ಮೇ ತಿಂಗಳಲ್ಲಿ ಯಾವುದೇ ಸಿನಿಮಾ ಬಿಡುಗಡೆ ಆಗುವುದು ಕಷ್ಟ ಇದೆ ಎಂದು ಅರಿತು ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಒಂದು ಟೀಸರ್ ಬಿಡುಗಡೆ ಮಾಡಲು ತಯಾರಿ ನಡೆದಿದೆ. ನಾಳೆ ಬೆಳಗ್ಗೆ 10 ಗಂಟೆ 05 ನಿಮಿಷಕ್ಕೆ ದರ್ಶನ್ ಅಭಿಮಾನಿಗಳು ಖುಷಿ ಪಟ್ಟುಕೊಳ್ಳುವ ಸಮಯ. ಯೂಟ್ಯೂಬ್ ಅಲ್ಲಿ ‘ರಾಬರ್ಟ್’ ಟೀಸರ್ ನೋಡಿ ಆನಂದಿಸಬಹುದು.
ರಾಬರ್ಟ್ ಸಿನಿಮಾ ಲಿರಿಕಲ್ ಹಾಡಿನಿಂದಲೂ ದೊಡ್ಡ ಸುದ್ದಿ ಮಾಡಿದೆ. ಬಾ ಬಾ ಬಾ ರೆಡಿ, ಹಾಡನ್ನು ವ್ಯಾಸರಾಜ್ ಸೋಸಲೆ, ಸಂತೋಷ್ ವೆಂಕಿ, ಅನಿರುಧ್ ಶಾಸ್ತ್ರಿ , ಸುಪ್ರೀತ್ ಫಾಲ್ಗುಣ, ನಿಖಿಲ್ ಪಾರ್ಥಸಾರಥಿ, ಮಧ್ವೆಶ್ ಭಾರದ್ವಾಜ್ ಹಾಡಿದ್ದಾರೆ. ಈ ಹಾಡಿನ ರಚನೆ ಡಾ ವಿ ನಾಗೇಂದ್ರ ಪ್ರಸಾದ್ ಮಾಡಿದ್ದಾರೆ. ಅರ್ಜುನ್ ಜನ್ಯ ರಾಗ ಸಂಯೋಜನೆಯ ಈ ಹಾಡು ಸಖತ್ ಹಿಟ್ ಆಗಿತ್ತು.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಉಮಾಪತಿ ಶ್ರೀನಿವಾಸ್ ಗೌಡ, ಸುಧಾಕರ್ ರಾಜ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ. ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಷನ್ ಹಾಗೂ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.