ಅಂತೂ ಕನ್ನಡ ಪ್ರೇಕ್ಷಕರು ಖುಷಿಪಡುವಂತಹ ಒಂದು ಸುದ್ದಿ ಹೊರಬಿದ್ದಿದೆ. ಲಾಕ್‍ಡೌನ್ ಮುಗಿದು ಇಷ್ಟು ದಿನಗಳಾದರೂ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ಆಗುತ್ತಿಲ್ಲ ಎನ್ನುವಾಗ ಪುನೀತ್ ಅಭಿನಯದ ಯುವರತ್ನ ಚಿತ್ರವು ಏಪ್ರಿಲ್ 11ಕ್ಕೆ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಗಿತ್ತು. ಅದಕ್ಕೂ ಮೂರು ವಾರಗಳ ಮುಂಚೆಯೇ, ಅಂದರೆ ಮಾರ್ಚ್ 11ಕ್ಕೆ ಶಿವರಾತ್ರಿಯ ಸಂದರ್ಭದಲ್ಲಿ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರ ಬಿಡುಗಡೆಯಾಗಲಿದೆ.
ರಾಬರ್ಟ್ ಚಿತ್ರವು ಮಾರ್ಚ್ 11ರಂದು ಬಿಡುಗಡೆಯಾಗುತ್ತಿದೆ ಎಂದು ಸ್ವತಃ ದರ್ಶನ್ ಘೋಷಿಸಿದ್ದಾರೆ. ಇಂದು ಫೇಸ್‍ಬುಕ್ ಲೈವ್ ಬಂದ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಚಿತ್ರತಂಡದವರು ಸೋಷಿಯಲ್ ಮೀಡಿಯಾ ಮೂಲಕ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿರುವ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ: ಹೈಕಮಾಂಡ್ ಭೇಟಿಗೆ ದೆಹಲಿಗೆ ಬಂದಿಳಿದ ಸಿಎಂ ಬಿಎಸ್ವೈ
ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಕೇಳಿ ದರ್ಶನ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಏಕೆಂದರೆ, ಕಳೆದ ಒಂದು ವರ್ಷದಿಂದ ಅಭಿಮಾನಿಗಳು ಚಿತ್ರಕ್ಕೆ ಕಾಯುತ್ತಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಮೊದಲು ಕ್ರಿಸ್ಮಸ್ ವೇಳೆಗೆ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆ ನಂತರ ಸಂಕ್ರಾಂತಿ ಎಂದಾಯಿತು. ಇದೀಗ ಮಹಾಶಿವರಾತ್ರಿಗೆ ಚಿತ್ರದ ಬಿಡುಗಡೆ ಫಿಕ್ಸ್ ಆಗಿದೆ.
ರಾಬರ್ಟ್ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿ ಆಶಾ ಭಟ್ ಅಭಿನಯಿಸಿದ್ದು, ಮಿಕ್ಕಂತೆ ವಿನೋದ್ ಪ್ರಭಾಕರ್, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ಒಂದು ಹಾಡನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಸರ್ಪ್ರೈಸ್ಗಳು ಕಾದಿವೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ತರುಣ್ ಸುಧೀರ್. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.