ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಇತ್ತೀಚೆಗಷ್ಟೇ 25 ದಿನಗಳನ್ನು ಮುಗಿಸಿದೆ. ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಚಿತ್ರವು ಮುಖ್ಯ ಚಿತ್ರಮಂದಿರವಾದ ಸಂತೋಷ್ನಿಂದ ಎತ್ತಂಗಡಿಯಾಗಲಿದೆ ಎಂಬ ಸುದ್ದಿಯೊಂದು ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಏಪ್ರಿಲ್ 9ರಂದು ತೆಲುಗು ನಟ ಪವನ್ ಕಲ್ಯಾಣ್ ಅವರ 'ವಕೀಲ್ ಸಾಬ್' ಚಿತ್ರವು ಸಂತೋಷ್ ಸೇರಿದಂತೆ ರಾಜ್ಯಾದ್ಯಂದ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವೊಂದು ಯಶಸ್ವಿಯಾಗಿ ಪ್ರದರ್ಶನ ಆಗುತ್ತಿರುವಾಗ, ಆ ಚಿತ್ರವನ್ನು ಕಿತ್ತು ತೆಲುಗು ಚಿತ್ರವೊಂದನ್ನು ಪ್ರದರ್ಶಿಸುವ ಔಚಿತ್ಯವೇನಿದೆ ಎಂಬ ಪ್ರಶ್ನೆ ಎದ್ದಿತ್ತಲ್ಲದೆ, ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.
ಆದರೆ, 'ರಾಬರ್ಟ್' ಚಿತ್ರ ಎತ್ತಂಗಡಿಯಾಗುತ್ತಿಲ್ಲ, ಅದು ಎಂದಿನಂತೆ ಪ್ರದರ್ಶನವಾಗುತ್ತಿದೆ ಎಂದು ಕಾರ್ತಿಕ್ ಗೌಡ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ತಮ್ಮ ಕೆಆರ್ಜಿ ಕನೆಕ್ಟ್ಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಕಾರ್ತಿಕ್, 'ವಕೀಲ್ ಸಾಬ್' ಚಿತ್ರವು ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದ್ದು, 'ರಾಬರ್ಟ್' ಬಿಡುಗಡೆಗೆ ಅದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಕ್ಮೈಶೋನಲ್ಲಿ ಹೊಸದಾಗಿ ಅಪ್ಡೇಟ್ ಆಗಿಲ್ಲವಾದ್ದರಿಂದ, ಗೊಂದಲವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಹ ಚಿತ್ರವು ಇನ್ನಷ್ಟು ವಾರಗಳ ಕಾಲ ಸಂತೋಷ್ ಚಿತ್ರಮಂದಿರದಲ್ಲಿ ಮುಂದುವರೆಯಲಿದೆ ಮತ್ತು ಸದ್ಯಕ್ಕೆ ಎತ್ತಂಗಡಿಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಅಭಿಮಾನಿಗಳು ಶಾಂತರಾಗಿದ್ದಾರೆ.