ಬಾಲಿವುಡ್ ಚಿತ್ರರಂಗಕ್ಕೆ ಆಘಾತದ ಮೇಲೆ ಆಘಾತವಾಗುತ್ತಿದೆ. ನಿನ್ನೆಯಷ್ಟೇ ಇರ್ಫಾನ್ ಖಾನ್ ನಮ್ಮನ್ನೆಲ್ಲಾ ಅಗಲಿದರೆ ಇಂದು ರಿಷಿ ಕಪೂರ್ ಕೂಡಾ ನಿಧನರಾದರು. ಈ ಸುದ್ದಿ ಬಾಲಿವುಡ್ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿದಿದೆ. ಇಬ್ಬರು ಪ್ರತಿಭಾನ್ವಿತ ನಟರನ್ನು ಕಳೆದುಕೊಂಡು ಬಾಲಿವುಡ್ ಚಿತ್ರರಂಗ ದು:ಖ ವ್ಯಕ್ತಪಡಿಸಿದೆ.
ರಿಷಿ ಕಪೂರ್ ತಂದೆ ರಾಜ್ ಕಪೂರ್, ತಾತ ಪೃಥ್ವಿ ರಾಜ್ ಕಪೂರ್. ಇವರಿಗೆ ಕನ್ನಡ ಚಿತ್ರರಂಗದೊಂದಿಗೆ ಒಳ್ಳೆ ಬಾಂಧವ್ಯ ಇತ್ತು. 1971 ರಲ್ಲಿ. ರಾಜ್ ಕುಮಾರ್ ಅಭಿನಯದ 'ಸಾಕ್ಷ್ಯಾತ್ಕಾರ' ಸಿನಿಮಾದಲ್ಲಿ, ರಿಷಿ ಕಪೂರ್ ತಾತ ಪೃಥ್ವಿ ರಾಜ್ ಕಪೂರ್ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ನಿರ್ದೇಶಿಸಿದ್ದರು.
ಇನ್ನು ರಿಷಿ ಕಪೂರ್ ತಂದೆ ರಾಜ್ ಕಪೂರ್ ಕೂಡಾ ಕನ್ನಡ ಚಿತ್ರರಂಗದ ಜೊತೆ ಒಳ್ಳೆ ನಂಟು ಹೊಂದಿದ್ದರು. ಆಶ್ಚರ್ಯಕರ ಸಂಗತಿ ಅಂದ್ರೆ ರಾಜ್ ಕಪೂರ್ ಕಷ್ಟದ ದಿನಗಳಲ್ಲಿ, ಕನ್ನಡ ಚಿತ್ರರಂಗ ಅವರ ಕೈ ಹಿಡಿದಿತ್ತು. 1970 ರಲ್ಲಿ ರಾಜ್ ಕಪೂರ್ 'ಮೇರಾ ನಾಮ್ ಜೋಕರ್' ಎಂಬ ಸಿನಿಮಾ ಮಾಡಿದ್ದರು. ಮುಂಬೈನಲ್ಲಿ ಈ ಸಿನಿಮಾ ಫ್ಲಾಪ್ ಆಗುವ ಆಗುವ ಮೂಲಕ ಸಾಕಷ್ಟು ನಷ್ಟ ಅನುಭವಿಸಿದ್ರು.
ಆದರೆ ಕರ್ನಾಟಕದಲ್ಲಿ 'ಮೇರಾ ನಾಮ್ ಜೋಕರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಾರಣ ಈ ಸಿನಿಮಾದ ವಿತರಣೆ ಪಡೆದಿದ್ದ ಡಿಸ್ಟ್ರಿಬ್ಯೂಟರ್ಗಳು. ಈ ಸಿನಿಮಾದಲ್ಲಿ ಕೆಲವು ಬೇಡದ ದೃಶ್ಯಗಳನ್ನು ತೆಗೆದು, ಕನ್ನಡದಲ್ಲಿ ರಿಲೀಸ್ ಮಾಡಿದ್ದರಿಂದ, ಮುಂಬೈನಲ್ಲಿ ಸೋಲು ಕಂಡ 'ಮೇರಾ ನಾಮ್ ಜೋಕರ್' ಚಿತ್ರ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ಬಂದ ಲಾಭದಲ್ಲಿ ವಿತರಕರು ರಾಜ್ಕಪೂರ್ ಅವರಿಗೆ ಒಂದು ಲಕ್ಷ ರೂಪಾಯಿ ನೀಡಿದ್ದರಂತೆ. ಇನ್ನು ಅದೇ ದೃಶ್ಯಗಳನ್ನು ಮತ್ತೆ ಹಿಂದಿಯಲ್ಲಿ ತೆಗೆದು ರೀ ರಿಲೀಸ್ ಮಾಡಿದ್ದಾಗ ಮುಂಬೈನಲ್ಲಿ ಕೂಡಾ ಈ ಸಿನಿಮಾ ದೊಡ್ಡ ಹಿಟ್ ಆಯ್ತಂತೆ.