ಕಾಂತಾರಾ ಎಂಬ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ದೇಶಿಸುತ್ತಿರುವ ವಿಷಯವನ್ನು ರಿಷಭ್ ಮತ್ತು ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರು ಅಧಿಕೃತವಾಗಿ ಘೋಷಿಸಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆಯು ರಿಷಭ್ ಜೊತೆಗೆ ಚಿತ್ರ ಮಾಡುತ್ತಿರಬಹುದು ಎಂದು ಹಲವರು ಅಂದಾಜಿಸಿದ್ದರು. ಆದರೆ, ಈ ಚಿತ್ರವನ್ನು ರಿಷಭ್ ನಿರ್ದೇಶಿಸುತ್ತಿರುವ ವಿಷಯ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಏಕೆಂದರೆ, ಕಳೆದ ಮೂರು ವರ್ಷಗಳಿಂದ ನಿರ್ದೇಶನದಿಂದ ದೂರವೇ ಇದ್ದ ರಿಷಭ್, ಈಗ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ.
ರಿಷಭ್ ತಮ್ಮ ನಟನೆಗಿಂತ ನಿರ್ದೇಶನಕ್ಕೆ ಬಹಳ ಜನಪ್ರಿಯರು. ಮೊದಲ ಚಿತ್ರ ರಿಕ್ಕಿ ದೊಡ್ಡ ಮಟ್ಟದ ಹಿಟ್ ಆಗದಿರಬಹುದು, ಅದೊಂದು ಒಳ್ಳೆಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆ ನಂತರ ಬಂದ ಕಿರಿಕ್ ಪಾರ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಳ ಬಗ್ಗೆ ಹೇಳುವುದೇ ಬೇಡ. ಆ ಎರಡು ಚಿತ್ರಗಳು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಹೊಗಳಿಸಿಕೊಂಡಿವೆ. ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂತರ ರಿಷಭ್, ನಟನೆ ಮತ್ತು ನಿರ್ಮಾಣದಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಅವರು ನಿರ್ದೇಶನವನ್ನು ಬಿಟ್ಟೇಬಿಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡುವ ಮುನ್ನವೇ, ರಿಷಭ್ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳನ್ನು ನಿರ್ದೇಶನ ಮಾಡುವುದಕ್ಕೆ ಸಜ್ಜಾಗಿದ್ದಾರೆ.