ಭಾರತೀಯ ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದ ಕನ್ನಡದ ಎವರ್‌ಗ್ರೀನ್ ಹೀರೋ ಅಂತಾನೇ ಖ್ಯಾತಿ ಪಡೆದಿರುವ ನಟ ಅನಂತ್ ನಾಗ್. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ನಟನೆ ಮೂಲಕ ಅನಂತ್ ನಾಗ್ ಬ್ರ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ.
74 ವರ್ಷವಾದರೂ ಸಿನಿಮಾದಲ್ಲಿ ಇಂದಿಗೂ ನವ ನಾಯಕನಂತೆ ನಟಿಸುತ್ತಾರೆ. ಆದ್ರೆ ಇವರ ಸಿನಿ ಪಯಣದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ನಿಮ್ಮ ಮಹದಾಸೆಯನ್ನು ನಟ ರಿಷಬ್ ಶೆಟ್ಟಿ ಮತ್ತು ತಂಡ ಈಗ ಸಾಕಾರಗೊಳಿಸಿದೆ. ಅನಂತ್ ನಾಗ್ ಬಗ್ಗೆ ನಿಮಗೆಷ್ಟು ಗೊತ್ತು ಎಂಬ ಸಾಕ್ಷ್ಯಚಿತ್ರವನ್ನು ಹೊರತಂದಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಅನಂತ್ ನಾಗ್ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದು ಹೇಗೆ?, ಕುಟುಂಬದ ಹಿನ್ನೆಲೆ, 1967ರಲ್ಲಿ ಬಾಂಬೆಯಲ್ಲಿ ಅನಂತ್‌ನಾಗ್ ನಟಿಸಿದ ಮೊದಲ ನಾಟಕ ಯಾವುದು? ಆರಂಭದ ದಿನಗಳಲ್ಲಿ ಹಿಂದಿ, ಕನ್ನಡ, ಮರಾಠಿ ಚಿತ್ರಗಳಲ್ಲಿ ಅವರು ನಿಭಾಯಿಸಿದ ಪಾತ್ರಗಳು ಹೇಗಿದ್ದವು? ಹೀಗೆ ಹಲವಾರು ಕುತೂಹಲಕಾರಿ ವಿಚಾರಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.
ಅಷ್ಟೇ ಅಲ್ಲ, ಸಹೋದರ ಶಂಕರ್ ನಾಗ್ ಜೊತೆ ಸೇರಿ ಅನಂತ್ ನಾಗ್ ಮಾಡಿದ ಸಿನಿಮಾಗಳು, ನಂತರ ರಾಜಕೀಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು.. ಹೀಗೆ ಕೆಲವು ಸ್ವಾರಸ್ಯಕರ ವಿಚಾರಗಳನ್ನು ನಾಲ್ಕು ನಿಮಿಷದ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.
ಪ್ರಸಿದ್ಧ ನಟನಿಗೆ ಪದ್ಮ ಪ್ರಶಸ್ತಿ ಸಿಗಬೇಕು ಅನ್ನೋದು ಚಿತ್ರರಂಗ ಅಲ್ಲದೇ ಇಡೀ ಕರ್ನಾಟಕ ಜನತೆಯ ಆಸೆ. ಇತ್ತೀಚೆಗೆ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿತ್ತು. ಮೊದಲಿಗೆ ರಿಷಬ್ ಶೆಟ್ಟಿ ಈ ಅಭಿಯಾನದಲ್ಲಿ ಮುಖ್ಯ ಪಾತ್ರವಹಿಸಿದ್ದರು. ಇದೀಗ ಅನಂತ್ ನಾಗ್ ಬಗ್ಗೆ ಮಾಡಿರೋ, ಸಾಕ್ಷ್ಯಚಿತ್ರ ಕೂಡ ಆ ಅಭಿಯಾನದ ಮುಂದುವರಿದ ಭಾಗದಂತಿದೆ. ಇನ್ನು ಈ ಸಾಕ್ಷ್ಯಚಿತ್ರದಲ್ಲಿ ಇಂಗ್ಲಿಷ್ನಲ್ಲಿ ನಿರೂಪಣೆ ಮಾಡಲಾಗಿದ್ದು, ಕನ್ನಡ ಮಾತ್ರವಲ್ಲದೇ ಇತರೆ ಭಾಷೆಯ ಸಿನಿಪ್ರಿಯರು ಕೂಡ ಅನಂತ್ ನಾಗ್ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯಕವಾಗುತ್ತಿದೆ. ಸದ್ಯ ಈ ಸಾಕ್ಷ್ಯಚಿತ್ರವನ್ನ ಅಭಿಮಾನಿಗಳು ಮತ್ತು ಸಿನಿಮಾ ತಾರೆಯರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.