ಖ್ಯಾತ ಕರ್ನಾಟಕ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಪ್ರತಿದಿನ ಬೆಳಗ್ಗೆ ವೆಂಕಟೇಶ್ವರ ಸುಪ್ರಭಾತದ ಮೂಲಕ ಅವರ ಧ್ವನಿಯನ್ನು ಕೇಳುತ್ತಿರುತ್ತೇವೆ. ದೇಶದ ಅ್ಯತ್ಯುನ್ನತ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 104ನೇ ಜನ್ಮದಿನ ಇಂದು.
ಖ್ಯಾತ ಸಂಗೀತಗಾರ್ತಿ, ನಟಿ ಎಂ.ಎಸ್. ಸುಬ್ಬುಲಕ್ಷ್ಮಿ 104ನೇ ಜನ್ಮದಿನದ ಸವಿನೆನಪು - ಖ್ಯಾತ ಸಂಗೀತಗಾರ್ತಿ ಎಂ ಎಸ್ ಸುಬ್ಬುಲಕ್ಷ್ಮಿ
ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪಡೆದ, ಶ್ರೀ ವೆಂಕಟೇಶ್ವರ ಸುಪ್ರಭಾತ ಖ್ಯಾತಿಯ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜನ್ಮದಿನ ಇಂದು. ಬಾಲ್ಯದಲ್ಲೇ ಸಂಗೀತ ಶಿಕ್ಷಣ ಪಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಹಾಡಿರುವ ಸುಪ್ರಭಾತವನ್ನು ನಾವೆಲ್ಲರೂ ಪ್ರತಿದಿನ ಕೇಳುತ್ತಿರುತ್ತೇವೆ.
ಎಂ.ಎಸ್. ಸುಬ್ಬುಲಕ್ಷ್ಮಿ
ಈ ಮಹಾನ್ ಸಾಧಕಿಯ ಬಗ್ಗೆ ಹೇಳಿದಷ್ಟೂ ಸಮಯ ಸಾಲದು. ಅವರಿಗೆ ಕಲಾಸರಸ್ವತಿ ಹೇಗೆ ಒಲಿದಿದ್ದಳು ಎಂದು ತಿಳಿಯಲು ಅವರ ಹಾಡುಗಳನ್ನು ಕೇಳಿದರೆ ಸಾಕು. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಗ್ಗೆ ತಿಳಿಯಬೇಕಾದ ಕೆಲವೊಂದು ಪ್ರಮುಖ ವಿಚಾರಗಳು ಇಲ್ಲಿವೆ.
- ಎಂ.ಎಸ್. ಸುಬ್ಬುಲಕ್ಷ್ಮಿ ತಮಿಳುನಾಡಿನ ಮಧುರೈನಲ್ಲಿ 16 ಸೆಪ್ಟೆಂಬರ್ 1916ರಲ್ಲಿ ಜನಿಸಿದರು. ತಂದೆ ಸುಬ್ರಮಣ್ಯ ಅಯ್ಯರ್ ತಾಯಿ ಷಣ್ಮುಕವಡಿವೆರ್ ಅಮ್ಮಾಳ್.
- ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊದಲ ಹೆಸರು ಕುಂಜಮ್ಮ. ಮನೆ ಹಾಗೂ ನೆರೆಹೊರೆಯ ಎಲ್ಲರೂ ಅವರನ್ನು ಕುಂಜಮ್ಮ ಎಂದೇ ಕರೆಯುತ್ತಿದ್ದರು.
- ಇವರ ಅಜ್ಜಿ ಅಕ್ಕಮ್ಮಾಳ್ ವಯೋಲಿನ್ ವಾದಕರಾಗಿದ್ದರಿಂದ ಸುಬ್ಬುಲಕ್ಷ್ಮಿ ಅವರಿಗೆ ಚಿಕ್ಕಂದಿನಲ್ಲೇ ಸಂಗೀತ ಕಲೆ ಒಲಿಯಿತು. ತಮ್ಮ 10ನೇ ವಯಸ್ಸಿಗೆ ಎಂ.ಎಸ್. ಸುಬ್ಬುಲಕ್ಷ್ಮಿ ಮೊದಲ ಹಾಡೊಂದನ್ನು ರೆಕಾರ್ಡ್ ಮಾಡಿದರು.
- ಎಂ.ಎಸ್. ಸುಬ್ಬುಲಕ್ಷ್ಮಿ ಕೇವಲ ಗಾಯಕಿ ಮಾತ್ರವಲ್ಲ ಅವರು ಉತ್ತಮ ನಟಿ ಕೂಡಾ. ಸೇವಾಸದನಮ್, ಶಕುಂತಲಾ, ಸಾವಿತ್ರಿ, ಮೀರಾ ಎಂಬ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
- ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಹೆಸರು ತಂದುಕೊಟ್ಟದ್ದು ಶ್ರೀ ವೆಂಕಟೇಶ್ವರ ಸುಪ್ರಭಾತ. ಇದು ಇಂದಿಗೂ ಬಹಳ ಫೇಮಸ್. ದಕ್ಷಿಣ ಭಾರತದಾದ್ಯಂತ ಸುಪ್ರಭಾತವನ್ನು ಬಹುತೇಕ ಎಲ್ಲರೂ ಕೇಳುತ್ತೇವೆ.
- 1940 ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಟಿ. ಸದಾಶಿವಂ ಅವರನ್ನು ಮದುವೆಯಾದರು. ದೇಶ ವಿದೇಶ ಸೇರಿದಂತೆ ಎಂ.ಎಸ್. ಸುಬ್ಬುಲಕ್ಷ್ಮಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
- ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಮೊನ್ ಮ್ಯಾಗ್ಸೆಸ್ ಪ್ರಶಸ್ತಿ ಕಾಳಿದಾಸ್ ಸಮ್ಮಾನ್, ಭಾರತರತ್ನ ಪ್ರಶಸ್ತಿ ಸೇರಿ ಅನೇಕ ಉನ್ನತ ಪ್ರಶಸ್ತಿಗಳನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪಡೆದಿದ್ದಾರೆ.
- 2004 ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ 88 ವಯಸ್ಸಿನವರಾಗಿದ್ದಾಗ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾದರು.
- 2015 ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಫೋಟೋ ಇರುವ ಸ್ಟಾಂಪನ್ನು ಭಾರತ ಸರ್ಕಾರ ಬಿಡುಗಡೆ ಮಾಡಿತು. ಇದೂ ಕೂಡಾ ಅವರಿಗೆ ಸಂದ ದೊಡ್ಡ ಗೌರವ.
Last Updated : Sep 16, 2020, 4:46 PM IST