ಸ್ಯಾಂಡಲ್ವುಡ್ನಲ್ಲಿ ನೈಜ ಘಟನೆ ಆಧರಿಸಿ ಬಹಳಷ್ಟು ಸಿನಿಮಾಗಳು ತಯಾರಾಗಿವೆ. ಇನ್ನು ಕಾದಂಬರಿ ಹಾಗೂ ಪೌರಾಣಿಕ ಸಿನಿಮಾಗಳ ನಡುವೆ ಹೆಚ್ಚು ಸದ್ದು ಮಾಡಿದ ಚಿತ್ರಗಳು ಎಂದರೆ ನಿಜ ಜೀವನದ ಕಥೆ ಹೊಂದಿರುವ ರೌಡಿಸಂ ಸಿನಿಮಾಗಳು. ಹೀಗೆ ನೈಜ ರೌಡಿಸಂ ಘಟನೆ ಆಧರಿಸಿರುವ ಕಥೆಗಳು ಸ್ಯಾಂಡಲ್ವುಡ್ನಲ್ಲಿ ಸೂಪರ್ ಹಿಟ್ ಚಿತ್ರಗಳಾಗಿವೆ. ಅಂತಹ ಚಿತ್ರಗಳ ರೋಚಕ ಕಹಾನಿ ಇಲ್ಲಿದೆ ನೋಡಿ.
ಶಿವರಾಜ್ ಕುಮಾರ್ ಅಭಿನಯದ 'ಓಂ', ರೌಡಿಸಂ ಜೊತೆಗೆ ಮುದ್ದಾದ ಲವ್ ಸ್ಟೋರಿ ಕಥೆ ಹೊಂದಿದ್ದ ಚಿತ್ರ. ನಿರ್ದೇಶಕ ಉಪೇಂದ್ರ ಕೆಲವು ಪತ್ರಿಕೆಗಳಲ್ಲಿ ಬಂದ ನೈಜ ಘಟನೆಗಳ ಜೊತೆಗೆ ನಿಜವಾದ ರೌಡಿಗಳ ಕಥೆಯನ್ನು ಬೆಳ್ಳಿ ತೆರೆ ಮೇಲೆ ತೋರಿಸುವ ಮೂಲಕ ರೌಡಿಸಂ, ಶಾಶ್ವತ ಅಲ್ಲ ಎಂಬ ಜಾಗೃತಿಯನ್ನು ಮೂಡಿಸಿದ್ದರು.
'ಓಂ' ನಂತರ ಕನ್ನಡ ಚಿತ್ರರಂಗದಲ್ಲಿ ಬಂದ ನೈಜ ಘಟನೆಯ ರೌಡಿಸಂ ಸಿನಿಮಾ ಅಂದ್ರೆ 'ಆ ದಿನಗಳು'. ಇದು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ರಿಯಲ್ ಸ್ಟೋರಿ ಸಿನಿಮಾ. ಅಂದಿನ ರೌಡಿಸಂ ದಿನಗಳಲ್ಲಿ ಗುರುತಿಸಿಕೊಂಡಿದ್ದ, ಬರಹಗಾರ ಅಗ್ನಿ ಶ್ರೀಧರ್ ಬರೆದಿರುವ ನೈಜ ಕಥೆಯನ್ನು ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದರು. 'ಆ ದಿನಗಳು' ಸಿನಿಮಾ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸಿದ್ದ ಕೊತ್ವಾಲ್ ರಾಮಚಂದ್ರ ಎಂಬ ರೌಡಿಯ ಕಥೆಯನ್ನು 'ಆ ದಿನಗಳು' ಸಿನಿಮಾ ಒಳಗೊಂಡಿತ್ತು. 2007 ರಲ್ಲಿ ತೆರೆ ಕಂಡ ಈ ಸಿನಿಮಾ ನೈಜ ಕಥೆ ಆಧರಿಸಿದ್ದ ಕಾರಣಕ್ಕೆ ಸಕ್ಸಸ್ ಕಂಡು ನಟ ಚೇತನ್ಗೆ ಒಳ್ಳೆ ಹೆಸರು ತಂದುಕೊಡ್ತು. ಈ ಸಿನಿಮಾ ಬಳಿಕ ಚೇತನ್, ಆ ದಿನಗಳು ಹೀರೋ ಎಂದೇ ಗುರುತಿಸಿಕೊಂಡಿದ್ದಾರೆ.
'ಆ ದಿನಗಳು' ನಂತರ ಸ್ಯಾಂಡಲ್ವುಡ್ನಲ್ಲಿ ಬಂದ ರೌಡಿಸಂ ಸಿನಿಮಾ 'ಡೆಡ್ಲಿ ಸೋಮ'. 2005ರಲ್ಲಿ ತೆರೆ ಕಂಡ 'ಡೆಡ್ಲಿ ಸೋಮ' ಕನ್ನಡ ಚಿತ್ರರಂಗದಲ್ಲಿ ಭಾರೀ ಸಕ್ಸಸ್ ಕಂಡ ಸಿನಿಮಾ. ಬರಹಗಾರ ರವಿ ಬೆಳಗೆರೆ ಈ ಕಥೆಯನ್ನು ಬರೆದರೆ ರವಿ ಶ್ರೀವತ್ಸ ಚಿತ್ರಕ್ಕೆ ಸಾರಥಿಯಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಆದಿತ್ಯ 'ಡೆಡ್ಲಿ ಸೋಮ'ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದ ಕಾರಣ, ನಿರ್ದೇಶಕ ರವಿ ಶ್ರೀವತ್ಸ 'ಡೆಡ್ಲಿಸೋಮ ಭಾಗ 2' ಸಿನಿಮಾ ಮಾಡಿ ಯಶಸ್ಸು ಸಾಧಿಸಿದರು.