ಕುರಿ ಹಟ್ಟಿಯಲ್ಲೇ ಪ್ರಪಂಚ ಕಟ್ಟಿಕೊಂಡಿದ್ದ ಯುವಕನೊಬ್ಬ ರಿಯಾಲಿಟಿ ಷೋ ಮೂಲಕ ನಾಡಿನ ಜನರ ಮನಗೆದ್ದು, ಬೇಡಿಕೆಯ ಗಾಯಕನಾಗಿರೋದು ಈಗ ಇತಿಹಾಸ. ಇದೇ ಇತಿಹಾಸ ಇರುವ ಈ ಗಾಯಕನ ಜೀವನ ಗಾಥೆ ತೆರೆಮೇಲೆ ಬರಲಿದೆ.
ಹನುಮಂತನ ಜಿಂದಗಿಯ ರಿಯಲ್ ಕಹಾನಿಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆದಿದೆ. ಕುರಿಗಾಯಿ ಹನಮಂತ ಕುರಿ ಕಾಯುತ್ತಾ ತನ್ನ ಪಾಡಿಗೆ ತನ್ನ ಸಂತೋಷಕ್ಕಾಗಿ ಹಾಡುತ್ತಾ ಸಮಯ ಕಳೆಯುತ್ತಿದ್ದ. ಇದೇ ಹಾಡುಗಾರಿಕೆ ಇಡೀ ರಾಜ್ಯದ ಜನರನ್ನ ರಂಜಿಸುತ್ತಿದೆ.
ಈ ಹಿಂದೆ ಕತ್ತಲೆ ಕೋಣೆ ಎಂಬ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಉಡುಪಿ ಮೂಲದ ಸಂದೇಶ್ ಶೆಟ್ಟಿ ಈ ಸಿನಿಮಾ ಮಾಡೋ ಸಾಹಸಕ್ಕೆ ಕೈ ಹಾಕಿದ್ದಾರೆ. ಹನುಮಂತನ ಬಾಲ್ಯದಿಂದ ಹಿಡಿದು ರಿಯಾಲಿಟಿ ಶೋವರೆಗಿನ ಜೀವನ ಪಯಣ ಸಿಲ್ವರ್ ಸ್ಕ್ರೀನ್ ಮೇಲೆ ತರಲಾಗುತ್ತಂತೆ. ಸಿನಿಮಾಗೆ 8 ಹೆಸರುಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಒಂದು ಹೆಸರನ್ನು ಅಂತಿಮಗೊಳಿಸಲು ಚರ್ಚೆ ನಡೆಯುತ್ತಿದೆ. ತಸ್ಮಯ-2 ಪ್ರೋಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಖಾಸಗಿವಾಹಿನಿಯಲ್ಲಿ ರನ್ನರ್ ಅಪ್ ಆದ ಹನುಮಂತ ಹನುಮಂತನ ಊರು ಹಾವೇರಿ ಜಿಲ್ಲೆಯ ಸುತ್ತಮುತ್ತ ಹಾಗೂ ಬೆಂಗಳೂರಲ್ಲಿ ಚಿತ್ರೀಕರಣ ಮಾಡಲು ಯೋಚಿಸಲಾಗಿದೆ. ಒಟ್ಟು 6 ಹಾಡುಗಳು ಚಿತ್ರದಲ್ಲಿ ಇರಲಿವೆ. ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಈಗಾಗಲೇ ಹನುಮಂತನ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳಲ್ಲಿ ಹನುಮಂತನೊಂದಿಗೆ ಆತನ ಊರಲ್ಲಿ ಒಂದು ವಾರ ವಾಸ್ತವ್ಯ ಮಾಡಲಿದ್ದಾರಂತೆ. ಆತನೊಂದಿಗೆ ಇದ್ದು, ಆತನ ಬದುಕಿನ ಅಧ್ಯಯನ ನಡೆಸಿ ಕಥೆ ರೂಪಿಸುವ ಯೋಚನೆ ಸಂದೇಶ ಅವರದ್ದು.
ಸಿನಿಮಾ ನಿರ್ಮಾಣಕ್ಕೆ 1.5 ಕೋಟಿ ರೂ. ಬಜೆಟ್ ಅಂದಾಜಿಸಲಾಗಿದ್ದು, ಇಸ್ರೇಲ್ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹಣ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಅಂತಾ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ.
ಗಾಯನ ಲೋಕದ ಅದ್ಭುತ ಪ್ರತಿಭೆ ಹನುಮಂತ ಹನಮಂತನ ಪಾತ್ರಕ್ಕೆ ಪೈಪೋಟಿ....
ಹೊಸ ಉದಯೋನ್ಮುಖ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡುವ ನಿರ್ದೇಶಕ ಸಂದೇಶ್ ಶೆಟ್ಟಿ ಹನಮಂತನ ಚಿತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಹನುಮಂತನ ಪಾತ್ರ ಮಾಡಲು ರಾಜ್ಯದ ನಾನಾ ಕಡೆಗಳಿಂದ ನೂರಾರು ಜನರು ಮುಂದಾಗಿದ್ದಾರಂತೆ. ಮತ್ತೊಂದೆಡೆ ಹನುಮಂತನ ಜೀವನ ಚರಿತ್ರೆಯ ಚಿತ್ರಕ್ಕೆ ಹನಮಂತನಿಂದಲೇ ಅಭಿನಯ ಮಾಡಿಸಿ ಎನ್ನುವ ಒತ್ತಡವೂ ಹೆಚ್ಚಾಗುತ್ತಿದೆಯಂತೆ. ಹೀಗಾಗಿ ಈ ಬಗ್ಗೆ ನಿರ್ದೇಶಕ ಸಂದೇಶ್ ಬೇರೆ ಕಲಾವಿದರಿಂದ ಹನುಮಂತನ ಪಾತ್ರ ಮಾಡಿಸುತ್ತಾರಾ? ಅಥವಾ ಹನುಮಂತನ ಚಿತ್ರಕ್ಕೆ ಹನುಮಂತನೇ ನಾಯಕನಾಗುತ್ತಾನಾ ಸದ್ಯದಲ್ಲೇ ಗೊತ್ತಾಗಲಿದೆ.